ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಸಾರ್ವಕಾಲಿಕ ದಾಖಲೆ ಮುಟ್ಟುತ್ತದೆ. ನಿನ್ನೆ 14,859 ಹೊಸ ಕೇಸ್ಗಳು ಪತ್ತೆಯಾಗಿವೆ. ಬೆಂಗಳೂರು ಒಂದರಲ್ಲೇ 9,917 ಜನರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಇಂತಹ ಕೆಟ್ಟ ಪರಿಸ್ಥಿತಿ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ ಎಂದಿದ್ದಾರೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ 78 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಇದರಲ್ಲಿ ಬೆಂಗಳೂರಿನ ಸಂಖ್ಯೆಯೇ 57. ಜನರಿಗೆ ಬದುಕಿದ್ದಾಗ ಬೆಡ್ ಸಿಗುತ್ತಿಲ್ಲ. ಚಿಕಿತ್ಸೆ ಸಿಗದೇ ಮೃತಪಟ್ಟವರಿಗೆ ಸ್ಮಶಾನದಲ್ಲಿ ಜಾಗ ಸಿಗದಂತಹ ವಾತಾವರಣವಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆ ಹೆಚ್ಚಳ ಮಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡದಿರುವುದರಿಂದ ಸೋಂಕಿತರು ಚಿಕಿತ್ಸೆ ಸಿಗದೆ ಸಾಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಐಸಿಯು, ವೆಂಟಿಲೇಟರ್, ಆಕ್ಸಿಜನ್ ಮತ್ತು ರಮ್ಡೆಸಿವರ್ ಇಂಜೆಕ್ಷನ್ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ತುರ್ತು ಕ್ರಮಗಳ ಅಗತ್ಯ ಇದೆ. ಸರ್ಕಾರ ಕೂಡಲೇ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಲೇಬೇಕಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್ ಕೋವಿಡ್ಗೆ ಮೀಸಲಿಡಬೇಕು ಅನ್ನೋ ಆದೇಶ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಗಮನ ಹರಿಸಿ ಜನ ಚಿಕಿತ್ಸೆ ಸಿಗದೇ ಸಾಯುವಂತಹ ಪರಿಸ್ಥಿತಿಯನ್ನ ತಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ದಿನನಿತ್ಯ ಸಾವುಗಳ ಸಂಖ್ಯೆ ಏರುತ್ತಿರೋ ಈ ಸಂದರ್ಭದಲ್ಲಿ ಕಠಿಣ ನಿರ್ಬಂಧದ ಕ್ರಮಗಳು ಅನಿವಾರ್ಯ. ಈಗಾಗಲೇ ಹಲವು ರಾಜ್ಯಗಳು ಕಠಿಣ ನಿರ್ಬಂಧಗಳನ್ನು ಜಾರಿ ಮಾಡಿವೆ. ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಸರ್ಕಾರ ಕೊರೊನಾ ನಿಯಂತ್ರಣದತ್ತ ಗಮನ ಹರಿಸಲೇಬೇಕಿದೆ. ಜನಜೀವನಕ್ಕೆ ತೊಂದರೆಯಾಗದಂತಹ ಮಾರ್ಗಸೂಚಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.