ಬೆಂಗಳೂರು: ಪ್ರಶ್ನೋತ್ತರ ಸಮಯದಲ್ಲಿ ಉತ್ತರ ಹೇಳಬೇಕಾದ ಸಚಿವರ ಗೈರು ಹಾಜರಿಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಶ್ನೋತ್ತರ ಸಂದರ್ಭದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಪರವಾಗಿ ಇಂಧನ ಸಚಿವ ಸುನೀಲ್ ಕುಮಾರ್ ಉತ್ತರ ನೀಡುತ್ತಾರೆ ಎಂಬ ವಿಷಯವನ್ನು ಪ್ರಸ್ತಾಪಿಸಿದ ಸಭಾಧ್ಯಕ್ಷರು, ನಿನ್ನೆ ಸಹ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪರವಾಗಿ ಮಾಧುಸ್ವಾಮಿ ಅವರು ಉತ್ತರ ಕೊಟ್ಟಿದ್ದರು. ಇದರಿಂದ ಸದಸ್ಯರುಗಳಿಗೆ ಸೂಕ್ತ ಉತ್ತರ ಸಿಗುವುದು ಕಷ್ಟವಾಗುತ್ತದೆ. ಸಂಬಂಧಪಟ್ಟ ಸಚಿವರೇ ಸದನದಲ್ಲಿ ಹಾಜರಿದ್ದು, ಉತ್ತರ ಹೇಳಿದರೆ ಒಳ್ಳೆಯದು ಎಂದರು.
ಇದನ್ನೂ ಓದಿ: ಮೂರು ಮದುವೆಯಾದರೂ ಪತ್ನಿಗೆ ವಿವಾಹೇತರ ಸಂಬಂಧ ಆರೋಪ.. ಜೀವ ಭಯದಲ್ಲಿ 3ನೇ ಪತಿ!
ಸದನದಲ್ಲಿ ಸಚಿವರ ಗೈರು ಹಾಜರಿಗೆ ಕಾರಣ ನೂರಿರಬಹುದು. ಆದರೆ, ಪ್ರಶ್ನೋತ್ತರ ಅವಧಿಯಲ್ಲಾದರೂ ಸಂಬಂಧಿಸಿದ ಸಚಿವರು ಹಾಜರಿದ್ದು, ಉತ್ತರ ನೀಡುವುದು ಸೂಕ್ತ. ಸದನದಲ್ಲಿ ಯಾವುದೇ ಸಚಿವರುಗಳು ವಾರಕ್ಕೆ ಒಂದರೆಡು ದಿನ ಉತ್ತರ ನೀಡಬೇಕಾಗುತ್ತದೆ. ಆ ಎರಡೂ ದಿನದಲ್ಲಿ ಅವರು ಗೈರು ಹಾಜರಾಗುವುದು ಸರಿಯಲ್ಲ. ಇದನ್ನು ಸರ್ಕಾರದ ಸಚೇತಕ ಸತೀಶ್ ರೆಡ್ಡಿ ಗಮನಿಸಬೇಕು ಎನ್ನುತ್ತ, ಸಚಿವರುಗಳ ಗೈರು ಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಸದನದಲ್ಲಿ ಪ್ರಶ್ನೋತ್ತರ ಕಲಾಪದ ಅವಧಿಯಲ್ಲೂ ಪ್ರಶ್ನೆ ಕೇಳಿದ್ದ ಐದಾರು ಸದಸ್ಯರು ಗೈರು ಹಾಜರಾಗಿದ್ದರು. ಆಗ ಸಭಾಧ್ಯಕ್ಷರು ಏನು, ಪ್ರಶ್ನೆ ಕೇಳಬೇಕಾದ ಸದಸ್ಯರೇ ಗೈರು ಹಾಜರಾಗುತ್ತಿದ್ದಾರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಶ್ನೆ ಕೇಳಬೇಕಾದ ಶಾಸಕರೇ ಸದನಕ್ಕೆ ಗೈರು : ಶಾಸಕರಾದ ಮಸಾಲೆ ಜಯರಾಂ, ಶ್ರೀಮಂತ ಪಾಟೀಲ್, ಲಾಲಾಜಿ ಮೆಂಡನ್, ಸಂಗಮೇಶ್ವರ್, ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ್ ಮಾನೆ, ತನ್ವೀರ್ ಸೇಠ್ ಗೈರು ಹಾಜರಿಯಾಗಿದ್ದಾರೆ. ಎಲ್ಲರೂ ಎಲ್ಲಿ ಹೋದರು ಎಂದು ಸ್ಪೀಕರ್ ಪ್ರಶ್ನಿಸಿದರು.