ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹಗೊಳಿಸಿ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್ ಶಂಕರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿರುವುದಾಗಿ ಹೇಳಿದ್ರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೀಡಿದ ದೂರಿನ ಆಧಾರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ(ಕೆಪಿಜೆಪಿ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಹಾಗು ಸ್ಪೀಕರ್‌ಗೂ ಅವರು ಪತ್ರ ಸಲ್ಲಿಸಿದ್ದರು.
ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಮೂರು ವರ್ಷ 10 ಕಾಲ ಅನರ್ಹಗೊಳಿಸಲಾಗಿದೆ. ಪ್ರಸ್ತಕ್ತ 15 ನೇ ವಿಧಾನಸಭೆ ಪೂರ್ಣಗೊಳ್ಳಲಿರುವ 2023 ಮೇ ತಿಂಗಳವರೆಗೆ ಈ ಮೂವರು ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್ ಹೇಳಿದ್ದಾರೆ. ಇನ್ನು ಈ ವಿಧಾನಸಭೆ ಮುಕ್ತಾಯಗೊಳ್ಳುವರೆಗೂ ಈ ಮೂವರೂ ಕೂಡಾ ವಿಧಾನಸಭೆ ಪ್ರವೇಶ ಪಡೆದುಕೊಳ್ಳುವ ಹಾಗಿಲ್ಲ. ಜತೆಗೆ ಶಾಸಕ ಮತ್ತು ಮಂತ್ರಿ ಆಗುವ ಭಾಗ್ಯವನ್ನೂ ಕಳೆದುಕೊಂಡಿದ್ದಾರೆ.
ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವನ್ನು ಆದಷ್ಟು ಬೇಗ ಪರಿಶೀಲಿಸಿ ತಮ್ಮ ನಿಲುವು ತಿಳಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಇದೇ ವೇಳೆ ಮಾಹಿತಿ ನೀಡಿದರು.