ಬೆಂಗಳೂರು : 'ನಾನು ನಂಬಿದ ಅಕ್ಷರದ ಮೇಲೆ, ನಾನು ಪೂಜಿಸುವ ಸ್ವರದ ಮೇಲೆ ಆಣೆ.. ಮಗದೊಮ್ಮೆ ಹುಟ್ಟಿದರೆ ಅದು ಕರ್ನಾಟಕದಲ್ಲಿ ಹುಟ್ಟುತ್ತೇನೆ' ಎಂದು ಮೂಡುಬಿದಿರೆಯಲ್ಲಿ ನಡೆದಿದ್ದ 2015ರ ಆಳ್ವಾಸ್ ವಿರಾಸತ್ನಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಪಡೆದ ಬಳಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹೇಳಿದ್ದ ಭಾವೋದ್ರೇಕಿತ ಮಾತುಗಳು ಕನ್ನಡ ನಾಡು, ನುಡಿ, ಕನ್ನಡಿಗರ ಪ್ರೀತಿಗೆ ಋಣಿಯಂತಿತ್ತು.
ಭಾರತೀಯ ಸಿನಿಮಾ ಹಿನ್ನೆಲೆ ಗಾಯನ ಲೋಕದ, ಅದರಲ್ಲೂ ವಿಶೇಷವಾಗಿ ಸಂಗೀತದ ತವರೂರು ಕರ್ನಾಟಕದ ಕನ್ನಡಿಗರ ಗಾಯನ ಪ್ರೇಮಿಗಳ ಹೃದಯ ಸಿಂಹಾಸನದ ಅನಭಿಷಿಕ್ತ ದೊರೆ ಎಸ್‍ಪಿಬಿ, ಬೇರೆಲ್ಲರಿಗಿಂತ ತುಸು ಹೆಚ್ಚಾಗಿ ಇಷ್ಟವಾಗುತ್ತಾರೆ. ಅದು ಏಕೆ ಅಂತಾ ಅವರಿಗೂ ಅರ್ಥವಾಗಿಲ್ಲ.
ಕನ್ನಡಿಗರ ಅಭಿಮಾನದ ಕುರಿತು ಬಾಲು ಒಂದು ಕಡೆ ಹೇಳುತ್ತಾರೆ “ನಾನು ಮೂಲತಃ ಆಂಧ್ರ, ನನ್ನ ಮಾತೃ ಭಾಷೆ ಸಂಗೀತ, ನನನ್ನು ಇತರೆ ರಾಜ್ಯಗಳ ಭಾಷಿಗರು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಆದರೆ, ಕನ್ನಡಿಗರು ಮಾತ್ರ ನನ್ನ ಕಂಡರೆ ಅವರೆಲ್ಲರಿಗಿಂತ ತುಸು ಹೆಚ್ಚಾಗಿ ಪ್ರೀತಿಸುತ್ತಾರೆ. ಇದು ಯಾಕೆ ಅಂತಾ ನನಗೆ ಗೊತಿಲ್ಲ.
ಇಂತಹ ಪ್ರೀತಿಸಿಗುವುದೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಎಲ್ಲಿಂದಲೋ ಬಂದ ನಾನು, ಕನ್ನಡಿಗರ ಪ್ರೀತಿಯ ಮುಂದೆ ನಾನೇನು ಕೊಡಲಿ? ದೇವರೇ, ಮುಂದಿನ ಜನ್ಮ ಎಂದಿದ್ದರೆ ಅಂದು ಕನ್ನಡ ನಾಡಿನಲ್ಲಿ ಹುಟ್ಟುತ್ತೇನೆ” ಎಂದು ಎದೆ ತುಂಬಿ ಕನ್ನಡಿಗರ ಪ್ರೇಮ, ಔಧಾರ್ಯ, ಅಭಿಮಾನದ ಗೌರವಕ್ಕೆ ಎಸ್‍ಪಿಬಿಯ ಹೃದಯ ವೈಶಾಲ್ಯತೆಯಿಂದ ಮಾತಾಡಿದ್ದರು.