ಬೆಂಗಳೂರು: ಕೊರೊನಾ ನಿಯಂತ್ರಣ ಸ್ಥಿತಿಗತಿ ಕುರಿತು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಇದೀಗ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸುತ್ತಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದಾರೆ. ಕೋವಿಡ್ ಉಸ್ತುವಾರಿ ನಿರ್ವಹಿಸುತ್ತಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಡಾ.ಅಶ್ವತ್ಥನಾರಾಯಣ್, ಸಚಿವರಾದ ಅಶೋಕ್, ಸುಧಾಕರ್, ಅರವಿಂದ ಲಿಂಬಾವಳಿ ಉಪಸ್ಥಿತರಿದ್ದಾರೆ.
ಕೋವಿಡ್ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆ ಬಳಿಕ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವುದಕ್ಕೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ಪ್ರವಾಸಿ ತಾಣಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ, ಮೂರನೇ ಅಲೆಗೆ ದಾರಿ ಮಾಡಿಕೊಟ್ಟಂತೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆ ಮತ್ತು ಪ್ರವಾಸಿ ತಾಣಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಈ ಬೆನ್ನಲ್ಲೇ ಇಂದು ಕರ್ನಾಟಕ , ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ , ಕೇರಳ ಮತ್ತು ಒಡಿಶಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ಮೂಲಕ ಸಭೆ ನಡೆಸುತ್ತಿದ್ದಾರೆ. 6 ರಾಜ್ಯಗಳ ಮುಖ್ಯಮಂತ್ರಿಗಳಿಂದ ಕೋವಿಡ್ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದು ಕೆಲ ಸೂಚನೆಗಳನ್ನ ನೀಡಲಿದ್ದಾರೆ.
ಸಿಎಂ ಬಿಎಸ್ ವೈ ಮೋದಿ ವಿಡಿಯೋ ಕಾನ್ಪರೆನ್ಸ್ನಲ್ಲಿ ಪಾಲ್ಗೊಂಡಿದ್ದು, ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಮಂತ್ರಿಗಳಿಗೆ ವಿವರಣೆ ನೀಡಲಿದ್ದಾರೆ. ಎರಡನೇ ಅಲೆ ನಿರ್ವಹಣೆ, ನಿಯಂತ್ರಣ, ಅನ್ಲಾಕ್ ನಂತರದಲ್ಲಿ ಪಾಸಿಟಿವಿಟಿ ದರ ಹಾಗೂ ಮೂರನೇ ಅಲೆಗೆ ಮಾಡಿಕೊಂಡಿರುವ ಸಿದ್ದತೆಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ.