ಬೆಂಗಳೂರು: ಹೊಸ ವರ್ಷ ಬರಮಾಡಿಕೊಳ್ಳಲು ಎರಡು ದಿನಗಳಷ್ಟೇ ಬಾಕಿ ಇದೆ. ನಗರದ ಎಲ್ಲಾ ವಿಭಾಗಗಳಲ್ಲಿ ಪೊಲೀಸರು ಅಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಆಗ್ನೇಯ ವಿಭಾಗದಲ್ಲಿ ಪಾರ್ಟಿ ಪ್ರಿಯರ ಹಾಟ್ ಸ್ಪಾಟ್ಗಳಾಗಿರುವ ಕೋರಮಂಗಲ, ಎಚ್ಎಸ್ಆರ್ ಲೇಔಟ್ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಡಿಸಿಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ತಯಾರಿ ನಡೆದಿದೆ.
ಪ್ರತೀ ಪಬ್, ರೆಸ್ಟೋರೆಂಟ್ ಮುಂಭಾಗದಲ್ಲಿ ಪೊಲೀಸರು ಆಗ್ನೇಯ ವಿಭಾಗದಲ್ಲಿ ಪ್ರಮುಖವಾಗಿ 106 ಹೋಟೆಲ್ /ರೆಸ್ಟೋರೆಂಟ್ಸ್, 39 ಪಬ್ಗಳಿದ್ದು ಭದ್ರತಾ ದೃಷ್ಟಿಯಿಂದ 8 ಸೆಕ್ಟರ್ಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಪ್ರತಿ ಸೆಕ್ಟರ್ನಲ್ಲಿ ತಲಾ ಒಂದೊಂದು ಸೇಫ್ಟಿ ಐಲ್ಯಾಂಡ್, ವೀಕ್ಷಣಾ ಗೋಪುರ, ಮೊಬೈಲ್ ಸ್ಕ್ವಾಡ್, ಪಿಕಪ್ ಸ್ವಾಡ್ ಗಳನ್ನ ಸಿದ್ಧಪಡಿಸಿಕೊಳ್ಳಲಾಗಿದೆ. ಅಲ್ಲದೇ ಪ್ರತೀ ಪಬ್ ಒಳಗೆ ಮಾತ್ರವಲ್ಲ ಮತ್ತು ಹೊರಗೂ ಸಹ ಮಹಿಳಾ ಮತ್ತು ಪುರುಷ ಬೌನ್ಸರ್ಸ್ ನಿಯೋಜಿಸುವಂತೆ ಸೂಚಿಸಲಾಗಿದೆ. ಪಬ್, ರೆಸ್ಟೋರೆಂಟ್ಗಳ ಬಳಿ ಪೊಲೀಸರು ಸಹ ಭದ್ರತೆ ವಹಿಸಲಿದ್ದಾರೆ.
ಪೊಲೀಸರಿಂದಲೇ ಆಂಬ್ಯುಲೆನ್ಸ್ ವ್ಯವಸ್ಥೆ: ಸಂಭ್ರಮಾಚರಣೆ ವೇಳೆ ಅಸ್ವಸ್ಥರಾದರೆ, ಅಗತ್ಯವಿದ್ದರೆ ತುರ್ತು ಕ್ರಮವಾಗಿ ಪೊಲೀಸರಿಂದಲೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯೊಂದಿಗೆ ಮಾತನಾಡಲಾಗಿದ್ದು, ಡಿಸೆಂಬರ್ 31ರಂದು ಆಗ್ನೇಯ ವಿಭಾಗದ ಜನನಿಬಿಡ ಸ್ಥಳಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿದೆ.
ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿ: ಟ್ಯಾಕ್ಸಿ, ಕ್ಯಾಬ್ಗಳಿಗೆ ಪ್ರತ್ಯೇಕ ನಿಲುಗಡೆ, ಸಾರಿಗೆ ಸೌಲಭ್ಯ ಒದಗಿಸುವ ಓಲಾ, ಊಬರ್ ಸೇರಿದಂತೆ ಖಾಸಗಿ ಟ್ಯಾಕ್ಸಿ, ಕ್ಯಾಬ್ಗಳನ್ನ ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ. ಸಂಚಾರ ದಟ್ಟಣೆ ನಿಯಂತ್ರಣದ ದೃಷ್ಟಿಯಿಂದ ಈಗಾಗಲೇ ಆಯಾ ಕಂಪನಿಗಳು, ಚಾಲಕರೊಂದಿಗೆ ಚರ್ಚಿಸಿರುವ ಪೊಲೀಸರು ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿಪಡಿಸಿದ್ದಾರೆ.
ಬ್ರಿಗೇಡ್ ರಸ್ತೆಗೆ ಕಮಿಷನರ್ ಭೇಟಿ, ಪರಿಶೀಲನೆ: ನೂತನ ವರ್ಷಕ್ಕೆ ದಿನಗಣನೆ ಆರಂಭವಾಗಿದ್ದು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಇಂದು ಬ್ರಿಗೇಡ್ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಸರ್ಕಾರದ ಸಮ್ಮತಿ
ಪರಿಶೀಲನೆ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ 'ಹೊಸ ವರ್ಷದ ಸಂಭ್ರಮಾಚರಣೆಗೆ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಇದ್ದ ನಿರ್ಬಂಧ ಈ ಬಾರಿ ಇಲ್ಲವಾದ್ದರಿಂದ ಸೂಕ್ತ ಭದ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಅತಿ ಹೆಚ್ಚು ಜನ ಸೇರುವ ಸ್ಥಳಗಳು ಬ್ರಿಗೇಡ್ ರಸ್ತೆ ಹಾಗೂ ಎಂ.ಜಿ ರಸ್ತೆಗಳಾಗಿವೆ. ಆ ಸ್ಥಳಗಳ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಇರಲಿದ್ದು ಡ್ರೋಣ್ ಮೂಲಕ ನಿಗಾ ವಹಿಸಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.
ಸ್ತ್ರೀಯರು, ಮಕ್ಕಳು, ಹಿರಿಯ ನಾಗರಿಕರ ಭದ್ರತೆ ನಮ್ಮ ಆದ್ಯ ಕರ್ತವ್ಯ: ಸ್ತ್ರೀಯರು, ಮಕ್ಕಳು, ಹಾಗೂ ಹಿರಿಯ ನಾಗರಿಕರ ಭದ್ರತೆ ಇಲಾಖೆಯ ಆದ್ಯತೆಯಾಗಿದ್ದು ಆ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ದಾರೆ. ಈಗಾಗಲೇ ಕೆಲ ಪಬ್, ರೆಸ್ಟೋರೆಂಟ್ಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಕೈಗೊಂಡ ಬಗ್ಗೆ ಮಾತನಾಡಿರುವ ಆಯುಕ್ತರು 'ಕೆಲವೆಡೆ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನ ಅನುಸರಿಸಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ: ಬ್ರಿಗೇಡ್ ರಸ್ತೆಯಲ್ಲಿ ಡಿಸೆಂಬರ್ 31ರಂದು ವಾಹನ ಸಂಚಾರ ನಿರ್ಬಂಧವಿರಲಿದ್ದು, ಬದಲಿ ಮಾರ್ಗಗಳ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿ ನೀಡಲಾಗುವುದು ಎಂದು ತಿಳಿಸಿದ್ದಾರೆ.