ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಯಾರಾಗಬೇಕೆಂಬ ವಿಚಾರ ಇದೀಗ ಹೈಕಮಾಂಡ್ ಅಂಗಳ ತಲುಪಿದೆ. ಒಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಇನ್ನೊಂದೆಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದು ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಇದರಿಂದ ಮುಂದೆ ಗೊಂದಲ ಉಂಟಾಗದಿರಲಿ ಎಂಬ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕರ್ನಾಟಕ ಸಿಎಂ ಆಯ್ಕೆ ವಿಚಾರ ಸೋನಿಯಾ ಗಾಂಧಿ ಕೈ ತಲುಪಲಿದೆ. ಕೆಲವು ಗಂಟೆಗಳಲ್ಲಿ ದೆಹಲಿಗೆ ತೆರಳಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರಿಷ್ಠರನ್ನು ಭೇಟಿಯಾಗಿ ಮಾಹಿತಿ ತಿಳಿಸಲಿದ್ದಾರೆ. ಸಿಎಂ ಆಯ್ಕೆಯ ವಿಚಾರವನ್ನ ಸೋನಿಯಾ ಗಾಂಧಿ ಮುಂದಿ ಡಲಿರುವ ಮಲ್ಲಿಕಾರ್ಜುನ ಖರ್ಗೆ ಇದಕ್ಕೊಂದು ಪರಿಹಾರ ಕೇಳಲಿದ್ದಾರೆ.
ಇದನ್ನೂ ಓದಿ : ಆಪ್ತ ಶಾಸಕರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ
ಸೋನಿಯಾ ಗಾಂಧಿ ರಾಜ್ಯದ ಸಿಎಂ ಆಯ್ಕೆ ಯಾರು ಎಂದು ತೀರ್ಮಾನಿಸಲಿದ್ದಾರೆ. ಸೋನಿಯಾ ತೀರ್ಮಾನದ ಬಳಿಕ ರಾಜ್ಯಕ್ಕೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷರು ಶಾಸಕರ ಸಭೆ ಕರೆದು ಅವರ ಸಮ್ಮುಖದಲ್ಲಿ ಸಿಎಂ ಆಯ್ಕೆ ಘೋಷಿಸಲಿದ್ದಾರೆ.
ಸಿಎಂ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಮುಂದೆ 3 ಸಾಧ್ಯತೆಗಳು ಇವೆ:
1. ನೇರವಾಗಿ ಎಐಸಿಸಿಯಿಂದಲೇ ಸಿಎಂ ಯಾರು ಎಂದು ನಿರ್ಧಾರ: ಸಿದ್ದರಾಮಯ್ಯಗೆ ಸಿಎಂ ಅವಕಾಶವೋ, ಡಿ ಕೆ ಶಿವಕುಮಾರ್ಗೆ ಅಧಿಕಾರವೋ ಎಂದು ನೇರವಾಗಿ ಎಐಸಿಸಿ ಆಯ್ಕೆ ಮಾಡಲಿದೆ.
2. ಶಾಸಕರ ಅಭಿಪ್ರಾಯ ಪಡೆದು ಹೆಚ್ಚಿನ ಒಲವು ವ್ಯಕ್ತವಾದವರಿಗೆ ಸಿಎಂ ಪಟ್ಟ: ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಪರ ಹೆಚ್ಚಿನ ಶಾಸಕರು ಬೆಂಬಲ ನೀಡುವ ಸಾಧ್ಯತೆ ಇದೆ.
3. ಅಧಿಕಾರ ಹಂಚಿಕೆ ಸೂತ್ರ: ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಇಷ್ಟು ವರ್ಷ ಒಬ್ಬೊಬ್ಬರು ಸಿಎಂ ಎಂಬ ಅಧಿಕಾರ ಹಂಚಿಕೆ ಸೂತ್ರದ ಅವಕಾಶ ಸಹ ತೆರೆದಿದೆ.
ಇದನ್ನೂ ಓದಿ : ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಅಭ್ಯರ್ಥಿ ಇಂದೇ ಫೈನಲ್; ನಾಳೆ ಹೊಸ ಸಿಎಂ ಪ್ರಮಾಣ ಸಾಧ್ಯತೆ
ಮುಂದಿನ ಲೋಕಸಭೆ ಚುನಾವಣೆ ತನಕ ಇದೇ ಅಬ್ಬರ ಮುಂದುವರಿಸಬೇಕು ಎಂಬ ಸೂಚನೆಯನ್ನು ರವಾನೆ ಮಾಡಿಸುವ ಸಾಧ್ಯತೆ ಇದೆ. ಏಕೆಂದರೆ, ಇನ್ನೊಂದು ವರ್ಷದ ಬಳಿಕ ಲೋಕಸಭೆ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೂ ಕಾಂಗ್ರೆಸ್ ಗೆಲುವಿನ ಹವಾ ಮುಂದುವರಿಸಬೇಕಿದೆ. ಇದರ ಮಧ್ಯೆಯೇ ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಬರಬಹುದು. ಅಲ್ಲಿಯೂ ಕಾಂಗ್ರೆಸ್ ತಮ್ಮ ಕಮಾಲ್ ಮುಂದುವರಿಸಬೇಕಿದೆ. ಈ ಎಲ್ಲ ಹೋರಾಟಕ್ಕೂ ಸಜ್ಜುಗೊಳಿಸಲು ಪಕ್ಷದಲ್ಲಿ ಒಗ್ಗಟ್ಟು ಉಳಿದುಕೊಂಡಿದೆ ಎಂಬುದನ್ನು ತೋರಿಸಬೇಕಿದೆ. ಹೀಗಾಗಿ, ಸಿಎಂ ಆಯ್ಕೆಯಲ್ಲಿ ಯಾವುದೇ ಗೊಂದಲ ಆಗಿಲ್ಲ ಎನ್ನುವುದನ್ನು ಬಾಹ್ಯವಾಗಿ ತೋರಿಸಿ, ಅಂತಿಮವಾಗಿ ಒಮ್ಮತದ ನಾಯಕನ ಆಯ್ಕೆ ಮಾಡಬೇಕಾಗಿದೆ. ಇದರಿಂದ ಈ ವಿಚಾರಕ್ಕೆ ಹೈಕಮಾಂಡ್ ಮಧ್ಯಪ್ರವೇಶ ಅನಿವಾರ್ಯವಾಗಿದೆ.