ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ಗೆ ದಿಲ್ಲಿಗೆ ಬರುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬುಲಾವ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭೆ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎದುರಾದ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಇವರ ಮನವೊಲಿಸಿ ಅದೇ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸಲು ಸೋನಿಯಾ ಬುಲಾವ್ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸ್ಥಾನ ವಹಿಸಿಕೊಳ್ಳುವ ಸಂದರ್ಭ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಗೆ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಭರವಸೆ ನೀಡಿದ್ದರು. ಆದರೆ ಮಾತು ಉಳಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ತಮ್ಮ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಮೂಲಕ ಅವರು ತಮ್ಮ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನ ಎರಡನ್ನು ತ್ಯಜಿಸಲು ಮುಂದಾಗಿದ್ದರು. ಆದರೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ತೀವ್ರ ಒತ್ತಡದ ಹಿನ್ನೆಲೆ ಅವರನ್ನು ಈ ಎರಡು ಸ್ಥಾನದಲ್ಲಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಈ ಕುರಿತು ಮನದಟ್ಟು ಮಾಡಿಕೊಡಲು ದಿಲ್ಲಿಗೆ ಕರೆಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ವರದಿಯೂ ಸಿದ್ದು ಪರ?
ಕಳೆದ ಗುರುವಾರ ರಾಜ್ಯಕ್ಕೆ ಎಐಸಿಸಿ ವೀಕ್ಷಕರಾಗಿ ಆಗಮಿಸಿದ್ದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ದಿಲ್ಲಿಗೆ ಹಿಂತಿರುಗಿದ್ದು, ರಾಜ್ಯದ 50 ನಾಯಕರ ಜೊತೆ ನಡೆಸಿದ ಚರ್ಚೆಯ ವಿವರವನ್ನು ಸೋನಿಯಾ ಗಾಂಧಿಗೆ ವರದಿ ರೂಪದಲ್ಲಿ ಸಲ್ಲಿಕೆ ಮಾಡಿದ್ದಾರೆ. ಈ ವರದಿ ಕೂಡ ಸಿದ್ದರಾಮಯ್ಯ ಅವರ ಪರವಾಗಿಯೇ ಇದೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯದಲ್ಲಿ ಪಕ್ಷಕ್ಕೆ ಕಾಯಕಲ್ಪ ಸಿಗಬೇಕಾದರೆ ಸಿದ್ದರಾಮಯ್ಯ ನೇತೃತ್ವದ ನಾಯಕತ್ವ ಅನಿವಾರ್ಯ ಎಂದು ವರದಿ ಸ್ಪಷ್ಟಪಡಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕುರಿತ ವರದಿ ಆಧರಿಸಿ ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಬುಲಾವ್ ಕೊಟ್ಟಿದ್ದಾರೆ.
ಆತುರ ಇಲ್ಲ: ತುರ್ತಾಗಿ ಇಲ್ಲಿಗೆ ಬರುವ ಆತುರ ಏನೂ ಇಲ್ಲ. ನಿಧಾನವಾಗಿಯಾದರೂ ಸರಿ, ಆರೋಗ್ಯ ಚೇತರಿಕೆ ಆದ ಬಳಿಕವೇ ದೆಹಲಿಗೆ ಬರುವಂತೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಅದರಂತೆ ಹೊಸ ವರ್ಷದ ಮೊದಲ ದಿನ ದೆಹಲಿಯತ್ತ ಪ್ರಯಾಣ ಬೆಳೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಪ್ರತಿಪಕ್ಷ, ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಯುವ ಹಾಗೂ ಪಕ್ಷ ಬಲವರ್ಧನೆಗೆ ಶ್ರಮಿಸುವ ಭರವಸೆ ನೀಡಿ ವಾಪಸಾಗಲಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ಗೂ ಆಹ್ವಾನ: ರಾಜ್ಯ ನಾಯಕರ ಜೊತೆ ನಡೆಸಿದ ಚರ್ಚೆಯ ಫಲವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಸಿದ್ದರಾಮಯ್ಯ ಬಳಿಯೇ ಉಳಿಯಲಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದಿನೇಶ್ ಗುಂಡೂರಾವ್ ಸ್ಥಾನಕ್ಕೆ ಮಾಜಿ ಸಚಿವ ಹಾಗೂ ಪ್ರಮುಖ ಒಕ್ಕಲಿಗ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಹಿರಿಯ ಕಾಂಗ್ರೆಸ್ ನಾಯಕರಾದ ಹೆಚ್.ಕೆ.ಪಾಟೀಲ್ ಹಾಗೂ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಬೇಸರಗೊಳ್ಳಲಿದ್ದು, ಇವರಿಂದ ಉಂಟಾಗುವ ತೊಂದರೆ ತಪ್ಪಿಸಲು ರಾಷ್ಟ್ರೀಯ ಮಟ್ಟದಲ್ಲಿ ಹುದ್ದೆ ಕಲ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ವಿಚಾರವಾಗಿ ಚರ್ಚಿಸುವ ಉದ್ದೇಶದಿಂದ ಮಾಜಿ ಡಿಸಿಎಂ ಪರಮೇಶ್ವರ್ ಅವರು ದಿಲ್ಲಿಗೆ ಬರುವಂತೆ ಸೋನಿಯಾ ಗಾಂಧಿ ಬುಲಾವ್ ಕೊಟ್ಟಿದ್ದಾರೆ. ಈಗಾಗಲೇ ಪರಮೇಶ್ವರ್ ಎಐಸಿಸಿ ಕಾರ್ಯಾಧ್ಯಕ್ಷ ಹುದ್ದೆಯತ್ತ ಕಣ್ಣು ನೆಟ್ಟಿದ್ದು, ಬಹುತೇಕ ಆ ಸ್ಥಾನ ಅವರಿಗೇ ಸಿಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಕಾಯುತ್ತಿದ್ದಾರೆ ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೆ ಲಭಿಸುವ ಸೂಚನೆ ಬಂದಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಬುಲಾವ್ಗಾಗಿ ಕಾಯುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಇವರಿಗೆ ಪಕ್ಷದಿಂದ ಕರೆ ಬರುವ ನಿರೀಕ್ಷೆ ಇದ್ದು, ಇವರು ಕೂಡ ದಿಲ್ಲಿಗೆ ಹೋಗಿ ಬಂದ ನಂತರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.