ಬೆಂಗಳೂರು: ಹುಲಿ ಉಗುರು, ಆನೆ ದಂತ, ಜಿಂಕೆ ಕೊಂಬು ಸೇರಿದಂತೆ ಅಕ್ರಮವಾಗಿ ಇಟ್ಟುಕೊಂಡಿರುವ ಯಾವುದೇ ವನ್ಯಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಮೂರು ತಿಂಗಳ ಕಾಲಾವಕಾಶ ನೀಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು. ಅಕ್ರಮ ಸಂರಕ್ಷಣಾ ಅಧಿನಿಯಮ 1972 ಮತ್ತು ಇತ್ತೀಚೆಗೆ ಅಂದರೆ 2022ರಲ್ಲಿ ಕೇಂದ್ರ ಸರ್ಕಾರ ಈ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ವಯ ಯಾವುದೇ ವನ್ಯಜೀವಿಯ ಅಂಗಾಂಗವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು, ಸಾಗಾಟ ಮಾಡುವುದು, ಮನೆಯಲ್ಲಿ ಇಟ್ಟುಕೊಳ್ಳುವುದು, ಮಾರಾಟ ಮಾಡುವುದು, ಧರಿಸುವುದು, ವನ್ಯಜೀವಿಗಳ ಮಾಂಸ ಭಕ್ಷಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.
ಪ್ರಮಾಣಪತ್ರ ಪಡೆದಿರುವವರಿಗೆ ಈಗಲೂ ಅಂತಹ ವಸ್ತು ಇಟ್ಟುಕೊಳ್ಳಲು ಅವಕಾಶ ಇದೆ. ಆದರೆ ಹಲವರಿಗೆ ಈ ಹಿಂದೆ ನೀಡಲಾಗಿದ್ದ ಕಾಲಾವಕಾಶದ ಬಗ್ಗೆ ಸಾರ್ವಜನಿಕ ಮಾಹಿತಿಯ ಕೊರತೆ ಇದ್ದು, ಇದು ಶಿಕ್ಷಾರ್ಹ ಅಪರಾಧ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಮುಗ್ಧ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಕಾರಣಕ್ಕಾಗಿ ಮತ್ತೊಮ್ಮೆ ವನ್ಯಜೀವಿ ಉತ್ಪನ್ನ ಪ್ರಮಾಣೀಕರಣಕ್ಕೆ ಕೊನೆಯ ಅವಕಾಶ ನೀಡಬೇಕು ಎಂಬ ಸಾರ್ವಜನಿಕರ ಮನವಿಗೆ ಸರ್ಕಾರ ಸ್ಪಂದಿಸಿದೆ. 3 ತಿಂಗಳ ಕಾಲಾವಕಾಶ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಿಎಂ ಹೊಸ ಸಲಹೆಗಾರರ ಅನರ್ಹತೆ ತಡೆಗೆ ಮಸೂದೆ: ಸಂಪುಟ ಸಭೆಯಲ್ಲಿ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ 2024ಕ್ಕೆ ಅನುಮೋದನೆ ನೀಡಲಾಗಿದೆ. ಹೊಸದಾಗಿ ಸಿಎಂ ಸಲಹೆಗಾರರಾಗಿ ನೇಮಕವಾದ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್ ಮತ್ತು ಆಡಳಿತ ಸುಧಾರಣಾ ಅಧ್ಯಕ್ಷರಾಗಿ ನೇಮಕವಾದ ಆರ್.ವಿ. ದೇಶಪಾಂಡೆಯವರ ಅನರ್ಹತೆ ತಡೆಗಾಗಿ ಈ ಮಸೂದೆ ತರಲಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಯಾವುದೇ ವ್ಯಕ್ತಿ ಆರ್ಥಿಕ ಸಲಹೆಗಾರರು, ಯಾವುದೇ ಆಯೋಗದ ಅಥವಾ ಅಧ್ಯಕ್ಷರು ಸದಸ್ಯರಾಗಿ ನೇಮಕಗೊಂಡಾಗ ಕರ್ನಾಟಕ ವಿಧಾನಸಭೆ/ ಪರಿಷತ್‌ನ ಸದಸ್ಯರಾಗಿರುವ ಕಾರಣಕ್ಕಾಗಿ ಅಂತಹವರ ಅನರ್ಹತೆ ತಡೆಯಲು ತಿದ್ದುಪಡಿ ತರಲಾಗಿದೆ.
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು:
- ಡಾ. ಬಿ.ಎಂ. ಯೋಗೇಶ್ ಗೌಡ, ಆಡಳಿತ ವೈದ್ಯಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ಲೋಕಾಯುಕ್ತ ಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ.
- ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು 2024ಕ್ಕೆ ಅನುಮೋದನೆ. ಈ ನಿಯಮಗಳ ಪ್ರಕಾರ 500 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಪ್ರತಿಯೊಬ್ಬ ಮಾಲಿಕ ಅಥವಾ ಖಾಸಗಿ ಸಂಸ್ಥೆ ಒಂದು ಅಧಿಕೃತ ಗ್ರಾಚ್ಯುಟಿ ಪಾವತಿ ನಿಧಿಯನ್ನು ಸ್ಥಾಪಿಸಬೇಕು. ಗ್ರಾಚ್ಯುಟಿ ನಿಧಿ ಸ್ಥಾಪಿಸಿದ ಸಂಸ್ಥೆಯು ಪ್ರತ್ಯೇಕವಾಗಿ ಒಂದು ಉಪಧನ ಟ್ರಸ್ಟ್‌ನ್ನು ಕಾರ್ಮಿಕರು ಮಾಲೀಕರ ಸಮಾನ ಪ್ರತಿನಿಧಿಗಳನ್ನು ಈ ಟ್ರಸ್ಟ್ ಹೊಂದಿರಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ.
- ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ 2023ಕ್ಕೆ ಘಟನೋತ್ತರ ಅನುಮೋದನೆ.
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಒಟ್ಟು 10 ಡಬಲ್ ಡೆಕ್ಕರ್ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಗಳನ್ನು ಜಿ.ಸಿ.ಸಿ. ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ
- 2023-24ನೇ ಸಾಲಿನಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆ ಬಾಕಿ ಹಣ 581.47 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಪಾವತಿಸುವುದರಿಂದ ವಿನಾಯಿತಿ ನೀಡಲು ಒಪ್ಪಿಗೆ. ಇದರಿಂದ ಶಕ್ತಿ ಯೋಜನೆಯಿಂದ ಆರ್ಥಿಕ ಒತ್ತಡದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಅದರಂತೆ ಕೆಎಸ್ಆರ್ಟಿಸಿ 243 ಕೋಟಿ ರೂ., ಬಿಎಂಟಿಸಿ 119 ಕೋಟಿ ರೂ., ವಾಯುವ್ಯ ರಸ್ತೆ ಸಾರಿಗೆ 103 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 111 ಕೋಟಿ ರೂ. ತೆರಿಗೆ ಹಣ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
- ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ "ಪ್ರಸಾದ್" (PRASHAD) ಯೋಜನೆಯಡಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯ ಸನ್ನಿಧಾನದ ಅಭಿವೃದ್ಧಿ ಯೋಜನೆಯನ್ನು 45.70 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಕೇಂದ್ರ ಪುರಸ್ಕೃತ ASCAD ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು 31.15 ಕೋಟಿ ರೂ. ವೆಚ್ಚದಲ್ಲಿ (ಕೇಂದ್ರದ ಪಾಲು ಶೇ. 60 ಮತ್ತು ರಾಜ್ಯದ ಪಾಲು ಶೇ. 40) ಒದಗಿಸುವ ಕಾರ್ಯಕ್ರಮದ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿದ್ಯಾರ್ಥಿನಿಲಯಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಂಬಂಧ ಪ್ರಸ್ತುತ ಇರುವ ಆರ್ಥಿಕ ಮಿತಿಯನ್ನು ಸಡಿಲಗೊಳಿಸಿ, ಎರಡು ವರ್ಷಗಳ ಅವಧಿಗೆ ಅಗತ್ಯವಿರುವ ಮೊತ್ತದಷ್ಟು ಖರೀದಿಸಲು ಜಿಲ್ಲೆಗೆ ಟೆಂಡರ್ ಕರೆದು ಅನುಮೋದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲು ಒಪ್ಪಿಗೆ.
- 2023-24ನೇ ಸಾಲಿನ ನಬಾರ್ಡ್ ಆರ್‌ಐಡಿಎಫ್-29ರ ಯೋಜನೆಯಡಿಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯಿಂದ ಮೂರು ವಿವಿಧ ಎಪಿಎಂಸಿ ಸಮಿತಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು 33 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ.
- ಕರ್ನಾಟಕ ಸಹಕಾರ ಸೇವಾ (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ.
- ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಲ್ಲಿ 5491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌ಗಳ) Data Digitization and Migration Support ಕಾರ್ಯವನ್ನು 71.38 ಕೋಟಿ ರೂ.ಗಳ ಮೊತ್ತದಲ್ಲಿ ಪೂರ್ಣಗೊಳಿಸಲು ಆಡಳಿತಾತ್ಮಕ ಅನುಮೋದನೆ.
- 2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು KPSC ಹೊರಡಿಸುವ ಅಧಿಸೂಚನೆಯಲ್ಲಿ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ (One time measure) ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ಸಮ್ಮತಿ.
- ಬಿವಿಬಿ ಇಂಜಿನಿಯರಿಂಗ್ ಮಹಾವಿದ್ಯಾಲಯ, ಹುಬ್ಬಳ್ಳಿ ಅನುದಾನಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸೇವೆಯನ್ನು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಅನುದಾನಿತ ವಿಭಾಗಗಳಿಗೆ ಮುಂದುವರೆಸಲು ಒಪ್ಪಿಗೆ.
- ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಇಂಜಿನಿಯರಿಂಗ್ ಯೂನಿವರ್ಸಿಟಿ (UVCE) ಉನ್ನತೀಕರಣ ಹಾಗೂ ಅದಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 25 ಕೋಟಿ ರೂ.ಗಳ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024 ಅನುಮೋದನೆ.
- ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023ಕ್ಕೆ ಘಟನೋತ್ತರ ಅನುಮೋದನೆ.
- ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023ಕ್ಕೆ ಘಟನೋತ್ತರ ಅನುಮೋದನೆ.
- ಕರ್ನಾಟಕ ಉಚ್ಚ ನ್ಯಾಯಾಲಯ (ತಿದ್ದುಪಡಿ) ವಿಧೇಯಕ, 2023ಕ್ಕೆ ಘಟನೋತ್ತರ ಅನುಮೋದನೆ.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 800 ಕೋಟಿಗಳ ಅನುದಾನದಲ್ಲಿ 43 ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾ ಯೋಜನೆಗೆ ಅನುಮೋದನೆ.
- ಲೋಕೋಪಯೋಗಿ ಇಲಾಖೆಗೆ ಎನ್ಹೆಚ್ ಅಡಿ 2,500 ಕಿ.ಮೀ.ವರೆಗೆ ರಸ್ತೆ ಅಭಿವೃದ್ಧಿಗಾಗಿ 9000 ಕೋಟಿ ರೂ. ವೆಚ್ಚದ ಮೊತ್ತಕ್ಕೆ ಅನುಮೋದನೆ.
ಇದನ್ನೂ ಓದಿ: ಸುಮ್ಮನೆ ವಿವಾದ ಸೃಷ್ಟಿಸುತ್ತಿರುವ ಬಿಜೆಪಿ ನಾಯಕರು: ಎಂ.ಬಿ.ಪಾಟೀಲ್