ಬೆಂಗಳೂರು: ಮೇಯರ್ ಚುನಾವಣೆಗೆ ಪ್ರಾದೇಶಿಕ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಮತದಾರರ ಪಟ್ಟಿ ಸಿದ್ಧವಾಗಿದ್ದು, ಐವರು ಅನರ್ಹ ಶಾಸಕರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
ಸೆಪ್ಟಂಬರ್ 28 ರಂದು ಮೇಯರ್-ಉಪಮೇಯರ್ ಅಧಿಕಾರ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಮೇಯರ್ ಚುನಾವಣೆಗೆ ಪ್ರಾದೇಶಿಕ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಬೇಕಾದ ತಯಾರಿ ನಡೆಸುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ ಶಾಸಕರಾದ ರೋಷನ್ ಬೇಗ್, ಮುನಿರತ್ನ, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು ಮತ್ತು ಗೋಪಾಲಯ್ಯ ಹೆಸರನ್ನು ಕೈಬಿಡಲಾಗಿದೆ.
ಈ ಬಾರಿ ಮೇಯರ್ ಚುನಾವಣಾ ಮತದಾರರ ಒಟ್ಟು ಸಂಖ್ಯೆ 257. ಮುಂದಿನ ತಿಂಗಳು ನಡೆಯಲಿರುವ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಿ, ಸಿದ್ಧತೆ ಮಾಡಲಾಗಿದೆ. ಅನರ್ಹರ ಹೆಸರು ಕೈಬಿಡುವುದರ ಜೊತೆಗೆ ನೂತನವಾಗಿ ಆಯ್ಕೆ ಆಗಿರುವ ಲೋಕಸಭಾ ಸದಸ್ಯರ ಹೆಸರಗಳನ್ನು ಸೇರ್ಪಡೆ ಮಾಡಲಾಗಿದೆ. ಈಗಾಗಲೇ ಪರಿಷ್ಕೃತ ಹೊಸ ಪಟ್ಟಿಯನ್ನು ಪಾಲಿಕೆ ಕೌನ್ಸಿಲ್ ಸೆಕ್ರೆಟರಿ ಪಲ್ಲವಿ, ಪ್ರಾದೇಶಿಕ ಆಯುಕ್ತರಿಗೆ ರವಾನಿಸಿದ್ದಾರೆ.