ಬೆಂಗಳೂರು: ರಾಜ್ಯದಲ್ಲಿ 6 ತಿಂಗಳಿನ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವು 'ತಿಂಗಳು ಆರು ನಿರ್ಣಯ ನೂರು' ಸಮಾರಂಭ ನಡೆಸಿತು. ತನ್ನ ಆರು ತಿಂಗಳ ಆಡಳಿತದಲ್ಲಿನ ಸಾಧನೆಗಳ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಿದೆ. ಆದರೆ ಬೊಮ್ಮಾಯಿ ಸರ್ಕಾರದ ಆಡಳಿತದಲ್ಲಿ ಕೆಲ ವೈಫಲ್ಯಗಳೂ ಕೂಡ ಎದ್ದು ಕಾಣುತ್ತವೆ.
ಸದ್ಯ ಬೊಮ್ಮಾಯಿ ಸರ್ಕಾರವು ಆರು ತಿಂಗಳ ಆಡಳಿತದ ಸಂಭ್ರಮದಲ್ಲಿದೆ. ಅದಕ್ಕಾಗಿ ವಿಧಾನಸೌಧದಲ್ಲಿ ವಿಶೇಷ ಸಮಾರಂಭ ನಡೆಸಿ, ಆರು ತಿಂಗಳ ಆಡಳಿತದ ಸಾಧನೆಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಸಾಧನೆಯ ಕಿರುಹೊತ್ತಿಗೆಯಲ್ಲಿ ಅತಿವೃಷ್ಟಿ ಪರಿಹಾರ, ಕೋವಿಡ್ ನಿರ್ವಹಣೆ, ಮಹಿಳೆಯರಿಗೆ, ರೈತರ ಪರ ತೆಗೆದು ಕೊಂಡಿರುವ ತೀರ್ಮಾನಗಳ ಬಗ್ಗೆ ವಿವರಿಸಲಾಗಿದೆ. ಬೊಮ್ಮಾಯಿ ಆಡಳಿತದಲ್ಲಿ ಸಾಧನೆಯ ಪ್ರಚಾರದ ಮಧ್ಯೆ ಕೆಲ ವೈಫಲ್ಯಗಳೂ ಇವೆ.
ಆಡಳಿತಕ್ಕೆ ಮುಟ್ಟದ ಚುರುಕು: ಆಡಳಿತಕ್ಕೆ ಚುರುಕು ಮುಟ್ಟಿಸುತ್ತೇನೆ ಎಂದೇ ಅಧಿಕಾರದ ಚುಕ್ಕಾಣಿ ಹಿಡಿದ ಬೊಮ್ಮಾಯಿ ಸರ್ಕಾರಕ್ಕೆ ಅದನ್ನು ಈಡೇರಿಸುವಲ್ಲಿ ಎಡವಿದೆ. ಆಡಳಿತಕ್ಕೆ ವೇಗ ಕೊಡುವಲ್ಲಿ ಸಿಎಂ ಬೊಮ್ಮಾಯಿ ವಿಫಲರಾಗಿದ್ದಾರೆ.
ಆಡಳಿತಕ್ಕೆ ಚುರುಕು ಮುಟ್ಟಿಸಿ ಜನಪರ ಆಡಳಿತವನ್ನು ಕೊಡುತ್ತೇನೆ ಎಂದು ಸಿಎಂ ಗದ್ದುಗೆ ಏರಿದಾಗಲೇ ಭರವಸೆ ನೀಡಿದ್ದರು. ಆದರೆ ಆಡಳಿತ ನಡೆಸಿ ಆರು ತಿಂಗಳು ಆದರೂ ನಿರೀಕ್ಷಿತ ಚುರುಕು ಮುಟ್ಟಿಸಲು ಸಾಧ್ಯವಾಗಿಲ್ಲ. ಕಡತ ವಿಲೇವಾರಿ ವಿಳಂಬವಾಗಿನೇ ಸಾಗುತ್ತಿದೆ. ಸಾವಿರಾರು ಕಡತಗಳು ವಿಲೇವಾರಿಯಾಗದೇ ವಿವಿಧ ಇಲಾಖೆಗಳಲ್ಲೇ ಹಾಗೆಯೇ ಉಳಿದುಕೊಂಡಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಡತ ವಿಲೇವಾರಿಯಾಗದೇ ಇರುವ ಬಗ್ಗೆ ಸಾರ್ವಜನಿಕರೂ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸಾರ್ವಜನಿಕರು ಮಾತ್ರವಲ್ಲ, ಬಿಜೆಪಿ ಶಾಸಕರೇ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಎಂಬುದು ವ್ಯಾಪಕವಾಗಿ ಕೇಳಿ ಬರುತ್ತಿರುವ ಆರೋಪವಾಗಿದೆ.
ಯೋಜನೆಗಳ ಅನುಷ್ಠಾನದಲ್ಲೂ ಹಿನ್ನಡೆ: ಯೋಜನೆಗಳ ಅನುಷ್ಠಾನದಲ್ಲೂ ವಿಳಂಬವಾಗುತ್ತಿರುವುದು ಬೊಮ್ಮಾಯಿ ಸರ್ಕಾರದ ಮತ್ತೊಂದು ವೈಫಲ್ಯವಾಗಿದೆ. ಹಲವು ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲೇ ಬಹಿರಂಗವಾಗಿದೆ.
ವಸತಿ ಯೋಜನೆಯಲ್ಲಿನ ಮನೆ ನಿರ್ಮಾಣ, ಮನೆ ಹಂಚಿಕೆಯಲ್ಲಿ ಬೊಮ್ಮಾಯಿ ಸರ್ಕಾರ ಕಳಪೆ ಪ್ರದರ್ಶನ ತೋರಿದೆ. ಪ್ರಮುಖವಾಗಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಜಲಜೀವನ್ ಮಿಷನ್, ಗ್ರಾಮೀಣ ಸಡಕ್ ಯೋಜನೆ, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಕಳಪೆ ಪ್ರಗತಿ ಸಾಧಿಸಿದೆ. ಈ ಯೋಜನೆಗಳ ಪೈಕಿ ಶೇ 30ಗಿಂತಲೂ ಕಡಿಮೆ ಪ್ರಗತಿ ಸಾಧಿಸಲಾಗಿದೆ. ಇತ್ತೀಚಿಗಿನ ಕೆಡಿಪಿ ಸಭೆಯಲ್ಲೇ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಪ್ರವಾಹ ಪರಿಹಾರ ವಿತರಣೆಯಲ್ಲೂ ಎಡವಿದ ಸರ್ಕಾರ: ಅತಿವೃಷ್ಟಿಗೆ ರಾಜ್ಯದಲ್ಲಿ ಸಾವಿರಾರು ಕೋಟಿ ಹಾನಿಯಾಗಿದೆ. ರೈತರ ಬೆಳೆ ಹಾನಿ ಬೃಹತ್ ಪ್ರಮಾಣದಲ್ಲಿ ಸಂಭವಿಸಿದೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದರು. ಬೊಮ್ಮಾಯಿ ಸರ್ಕಾರ ದುಪ್ಪಟ್ಟು ಪರಿಹಾರ ಹಣವನ್ನೇನೋ ಘೋಷಿಸಿತು. ಆದರೆ, ಪರಿಹಾರ ವಿತರಣೆ ಮಾತ್ರ ಪರಿಣಾಮಕಾರಿಯಾಗಿ ಸಾಧ್ಯವಾಗಿಲ್ಲ.
ಆರ್ಥಿಕ ಸಂಕಷ್ಟದಿಂದ ಸೊರಗಿರುವ ಸರ್ಕಾರ ಎಲ್ಲ ರೈತರಿಗೆ, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಇನ್ನೂ ಸಾಧ್ಯವಾಗಿಲ್ಲ. 2019ರಲ್ಲಾದ ಬಹುತೇಕ ಪ್ರವಾಹ ಸಂತ್ರಸ್ತರಿಗೆ ಇನ್ನೂ ಪರಿಹಾರ ಹಣ ಕೈಸೇರಿಲ್ಲ. ಇತ್ತ 2020, 2021ರಲ್ಲಾದ ಅನೇಕ ಪ್ರವಾಹ ಸಂತ್ರಸರ ಕೈಗೆ ಇನ್ನೂ ಪರಿಹಾರ ಹಣ ಸೇರಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ಸಂಪನ್ಮೂಲ ಕ್ರೋಢೀಕರಿಸುವಲ್ಲಿ ವಿಫಲ: ಕೋವಿಡ್ ನಿಂದಾಗಿರುವ ಆರ್ಥಿಕ ಸಂಕಷ್ಟದಿಂದ ಹೊರ ಬರುವಲ್ಲಿ ಇನ್ನೂ ಸಾಧ್ಯವಾಗಿಲ್ಲ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಆದ್ಯತೆ ಎಂದಿದ್ದರೂ, ಬೊಮ್ಮಾಯಿ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ನಿರೀಕ್ಷಿತ ಆದಾಯ ಸಂಗ್ರಹಿಸುವಲ್ಲಿ ವಿಫಲವಾಗಿದೆ.
ಆರ್ಥಿಕ ವರ್ಷ ಕೊನೆಯ ತಿಂಗಳಲ್ಲಿ ಇದ್ದರೂ ಆದಾಯ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂಬುದನ್ನು ಸ್ವತಃ ಸಿಎಂ ಬೆಳಗಾವಿ ಅಧಿವೇಶನದಲ್ಲೇ ಒಪ್ಪಿಕೊಂಡಿದ್ದಾರೆ. ಬಹುತೇಕ ಆದಾಯ ತರುವ ಇಲಾಖೆಗಳು ನಿರೀಕ್ಷಿತ ಆದಾಯ ಗುರಿ ಮುಂದೆ ಶೇ. 50-60ರಷ್ಟು ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಆದಾಯ ಸಂಗ್ರಹದ ಇತರ ಮಾರ್ಗೋಪಾಯ ಹುಡುಕುವಲ್ಲೂ ಸರ್ಕಾರ ವಿಫಲವಾಗಿದೆ.
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲ: ಬೊಮ್ಮಾಯಿ ಸರ್ಕಾರಕ್ಕೆ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಲ್ಲೂ ವಿಫಲವಾಗಿದೆ. ಹೈಕೋರ್ಟ್ ತರಾಟೆಗೆ ತೆಗೆದುಕೊಂಡರೂ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗಲೇ ಇಲ್ಲ.
ಹೈಕೋರ್ಟ್ ಛೀಮಾರಿ ಬಳಿಕ ಅಲ್ಲಿ ಇಲ್ಲಿ ರಸ್ತೆ ಗುಂಡಿ ಮುಚ್ಚಿದರೂ, ಬಹುತೇಕ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಲೇ ಇಲ್ಲ. ಬೆಂಗಳೂರಿನ ಬಹುತೇಕ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗದೇ ಸರ್ಕಾರ ಕೈ ಚೆಲ್ಲಿ ಕೂತಂತೆ ಇದೆ. ಇತ್ತ ಸಾರ್ವಜನಕರಿಂದಲೂ ಬೆಂಗಳೂರು ರಸ್ತೆ ದುರವಸ್ತೆ ಬಗ್ಗೆ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಲೇ ಇದ್ದಾರೆ.
ಬೆಟ್ಟದಷ್ಟು ಬೆಳೆದ ಬಾಕಿ ಬಿಲ್ ಮೊತ್ತ: ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಾಗಿ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಬಿಲ್ ಮೊತ್ತ ಬೆಟ್ಟದಷ್ಟು ಬೆಳೆದು ನಿಂತಿದೆ. ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ, ಆರೋಗ್ಯ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ. ಬಾಕಿ ಬಿಲ್ ಉಳಿದು ಕೊಂಡಿದೆ. ಈ ಬಾಕಿ ಬಿಲ್ ಪಾವತಿಸುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ.
ಆರ್ಥಿಕವಾಗಿ ಸೊರಗಿರುವ ಸರ್ಕಾರಕ್ಕೆ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿ, ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಶೇ 40ರಷ್ಟು ಕಮಿಷನ್ ನೀಡದೇ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಸದ್ಯಕ್ಕೆ ಈ ಪ್ರಮುಖ ಇಲಾಖೆಗಳಿಂದ ಸುಮಾರು 20,000 ಕೋಟಿ ರೂ. ಬಿಲ್ ಬಾಕಿ ಉಳಿದುಕೊಂಡಿದೆ.
ಪಾದಯಾತ್ರೆ, ಸಮಾವೇಶ ನಿಯಂತ್ರಿಸುವಲ್ಲಿ ವಿಫಲ: ಕೋವಿಡ್ ಮೂರನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆ ಬೊಮ್ಮಾಯಿ ಸರ್ಕಾರ ವೀಕೆಂಡ್ ಕರ್ಫ್ಯೂ ಸೇರಿ ಹಲವು ನಿರ್ಬಂಧಗಳನ್ನು ಹೇರಿತ್ತು. ಈ ಸಂದರ್ಭ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸಿತ್ತು. ಕೋವಿಡ್ನ ಎಲ್ಲ ನಿಯಮ ಉಲ್ಲಂಘಿಸಿದರೂ ಕಾಂಗ್ರೆಸ್ನ ಪಾದಯಾತ್ರೆಯನ್ನು ತಡೆಯುವಲ್ಲಿ ಬೊಮ್ಮಾಯಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.
ಸಾರ್ವಜನಿಕವಾಗಿ ಸರ್ಕಾರದ ನಿಷ್ಕ್ರಿಯತೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಜನಸಾಮಾನ್ಯರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ ಎಂಬ ಜನಾಕ್ರೋಶ ವ್ಯಕ್ತವಾಯಿತು. ಆದರೂ ರಾಜಕೀಯ ಉದ್ದೇಶದಿಂದ ಬೊಮ್ಮಾಯಿ ಸರ್ಕಾರ ಪಾದಯಾತ್ರೆ ನಿಯಂತ್ರಿಸುವಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಕಠಿಣ ಕ್ರಮ ಕೈಗೊಳ್ಳಲು ಮುಂದಾಯಿತು. ಸರ್ಕಾರದ ಈ ನಡೆ ವ್ಯಾಪಕವಾಗಿ ಟೀಕೆಗೆ ಒಳಗಾಯಿತು.
ಇತ್ತ ಹೊನ್ನಾಳಿಯಲ್ಲಿ ಗೂಳಿ ಸ್ಪರ್ಧೆಯನ್ನೂ ತಡೆಯಲು ಬೊಮ್ಮಾಯಿ ಸರ್ಕಾರ ವಿಫಲವಾಯಿತು. ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗೂಳಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಆದರೆ ಬೊಮ್ಮಾಯಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶಿಸಿತು.
ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿಯಿಂದ 91 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, 16 ಹಾಲಿ ಶಾಸಕರಿಗೆ ಸಿಗದ ಟಿಕೆಟ್