ಬೆಂಗಳೂರು: ನನ್ನ ಜೊತೆಗೆ ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಅವರಿಗೆ ನಮ್ಮ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳ ಬಗ್ಗೆ ತೀರ್ಮಾನ ಆಗಬೇಕು. ಆ ನಂತರ ಅವರನ್ನು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬರುವ ಕೆಲಸ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ್ ಸವದಿ ತಿಳಿಸಿದರು.
ಬಿಜೆಪಿ ಲೀಡರ್ಲೆಸ್ ಪಾರ್ಟಿ: ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ವಿಪಕ್ಷ ನಾಯಕರ ಆಯ್ಕೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಲೀಡರ್ಲೆಸ್ ಪಾರ್ಟಿ ಆಗಿದೆ. ಲೀಡರ್ ಇಲ್ಲದೇ ಇರೋದ್ರಿಂದ ಅಲ್ಲಿರೋರು ಕಾಂಗ್ರೆಸ್ಗೆ ಬರುತ್ತಿದ್ದಾರೆ. ಲೋಕಸಭಾ ಚುನಾವಣೆ ಅಷ್ಟರಲ್ಲಿ ಮತ್ತಷ್ಟು ಜನರು ಕಾಂಗ್ರೆಸ್ಗೆ ಬರ್ತಾರೆ. ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಇದೀಗ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ - ಜೆಡಿಎಸ್ ವಿಲೀನ ವಿಚಾರ: ಚುನಾವಣೆ ದೃಷ್ಟಿಯಿಂದ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ನನಗೆ ಇರುವ ಮಾಹಿತಿ ಪ್ರಕಾರ, ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗುತ್ತದೆ. ವಿಲೀನ ಆದರೆ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾಗ್ತಾರೆ ಎಂದು ತಿಳಿಸಿದರು. ರಾಜ್ಯಾಧ್ಯಕ್ಷರು ಇಲ್ಲದ ಸಮಯದಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಹುತೇಕ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಜೆಡಿಎಸ್ ವಿಲೀನ ಆಗಬಹುದು ಎಂದು ತಿಳಿಸಿದರು.
ಲಿಂಗಾಯತ ಅಧಿಕಾರಿಗಳ ಕುರಿತು ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಶ್ರೀಶೈಲ ಜಗದ್ಗುರುಗಳಿಂದ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸ್ವಾಮೀಜಿಯವರಿಗೆ ಅಂಕಿ ಅಂಶದ ಮಾಹಿತಿ ಕೊರತೆ ಇರುತ್ತೆ. ಈಗಾಗಲೇ ಸಚಿವರು ಶಾಮನೂರು ಶಿವಶಂಕರಪ್ಪರಿಗೆ ಮಾಹಿತಿ ನೀಡಿದ್ದಾರೆ. ಇದು ಮುಗಿದು ಹೋಗಿರುವ ಸಮಸ್ಯೆ. ಸಿಎಂ ಸಿದ್ದರಾಮಯ್ಯ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ಇದನ್ನೂ ಓದಿ: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆಗೆ ನಿಧಿ ಸಂಗ್ರಹ: ಕರ್ನಾಟಕ ಕೋರ್ಟ್ನಲ್ಲಿ ಇಬ್ಬರ ವಿರುದ್ಧ NIA ಚಾರ್ಜ್ಶೀಟ್
ಡಿಕೆಶಿ ತಿಹಾರ್ ಜೈಲಿಗೆ ಹೋಗುವ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಹುಶಃ ಅವರು ಬಿಜೆಪಿ ರಾಷ್ಟ್ರೀಯ ನಾಯಕರ ಬಳಿ ಅದೇ ಮಾತಾಡಿಕೊಂಡು ಬಂದಿರಬೇಕು ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟರು. ಇನ್ನೂ ರಾಜ್ಯದಲ್ಲಿ ಜಾತಿ ಗಣತಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜಾತಿಗಣತಿ ವರದಿ ಮಾಡಬೇಕು, ಮಾಡಬಾರದು ಎಂಬ ಕುರಿತು ಚರ್ಚೆ ಇದೆ. ಅಧಿಕೃತವಾಗಿ ಸಿಎಂ, ಸಂಬಂಧಪಟ್ಟ ಇಲಾಖೆಯ ಸಚಿವರಿಂದ ಹೇಳಿಕೆ ಬಂದಿಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.
ಇದನ್ನೂ ಓದಿ: ಭಾರತದ ಬಾಹ್ಯಾಕಾಶ ಆರ್ಥಿಕತೆಗೆ $44 ಬಿಲಿಯನ್ ತಲುಪುವ ಸಾಮರ್ಥ್ಯ; ಇನ್-ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ