ಬೆಂಗಳೂರು: ರಾಜ್ಯದಲ್ಲಿ ಜಾಲಮುಕ್ತ ಸೌರ ಪಂಪ್ ಸೆಟ್ ಯೋಜನೆ ಜಾರಿಗೊಳಿಸುವುದಕ್ಕಾಗಿ ಪಿಎಂ ಕುಸುಮ್ - ಬಿ ( ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾ ಅಭಿಯಾನ್)ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಪುರಸ್ಕೃತ ಈ ಯೋಜನೆಗೆ ಒಪ್ಪಿಗೆ ಲಭಿಸಿದ್ದು, ರಾಜ್ಯದಲ್ಲಿ ಹತ್ತು ಸಾವಿರ ರೈತ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಲಾಗುತ್ತದೆ. ರೈತರ ಹೊಲದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಅಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ಪಂಪ್ ಸೆಟ್ಗಳಿಗೆ ಬಳಸಬೇಕಾಗುತ್ತದೆ. ಒಟ್ಟು 307.23 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ 106.97 ಕೋಟಿ ರೂ. ಭರಿಸಲಿದೆ.
ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆ ಹೊಸ ಪಂಪ್ ಸೆಟ್ಗೆ ಮಾತ್ರ ಅನ್ವಯವಾಗುತ್ತದೆ. 3 ಹೆಚ್ಪಿ ಹೊಂದಿರುವ 250, 5 ಹೆಚ್ ಪಿ ಹೊಂದಿರುವ 750 ಹಾಗೂ 7.5 ಎಹೆಚ್ಪಿ ಪಂಪ್ ಸೆಟ್ ಹೊಂದಿರುವ 9000 ರೈತರಿಗೆ ಈ ಸೌಲಭ್ಯ ನೀಡಲಾಗುತ್ತದೆ.
ಅದೇ ರೀತಿ ಕರ್ನಾಟಕ ವಿದ್ಯುತ್ ನಿಗಮಕ್ಕೆ (ಕೆಪಿಸಿ) 2500 ಕೋಟಿ ರೂ. ಬ್ಯಾಂಕ್ ಸಾಲ ಪಡೆಯುವುದಕ್ಕೆ ಸರ್ಕಾರದಿಂದ ಭದ್ರತೆ ನೀಡುವುದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ 2022-23ಸಾಲಿನಲ್ಲಿ ಸಾಲ ಮಿತಿಯನ್ನು 3.5%ಗೆ ಹೆಚ್ಚಿಸುವ ಹಾಗೂ ರಾಜಸ್ವ ಕೊರತೆಗೆ ಅನುವು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ)ವಿಧೇಯಕ- 2022ಕ್ಕೆ ಅನುಮೋದನೆ ನೀಡಲಾಗಿದೆ.
ಇನ್ನು ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ವನ್ಯಜೀವಿಧಾಮವನ್ನು ಮಲೈಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವನೆಯನ್ನು ಮುಂದೂಡಲಾಗಿದೆ. ಅರಣ್ಯ ಸಚಿವ ಉಮೇಶ್ ಕತ್ತಿ ಸಂಪುಟ ಸಭೆಗೆ ಗೈರಾದ ಹಿನ್ನಲೆ ಪ್ರಸ್ತಾಪವನ್ನು ಮುಂದಕ್ಕೆ ಹಾಕಲಾಗಿದೆ. ವೆಚ್ಚ ಹೆಚ್ಚುವರಿಯಾಗಿರುವ ಹಿನ್ನೆಲೆ ಪರಿಷ್ಕೃತ ಟೆಂಡರ್ ಪಟ್ಟಿ ನೀಡುವ ನಿಟ್ಟಿನಲ್ಲಿ ರಾಯಚೂರು, ವಿಜಯಪುರ, ಮಂಡ್ಯ, ಉಡುಪಿ ಸೇರಿದಂತೆ ಐದು ಜಿಲ್ಲೆಗಳ ಜಲಜೀವನ್ ಮಿಷನ್ ಯೋಜನೆಯಡಿಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ವಿಚಾರವನ್ನು ಮುಂದಿನ ಸಂಪುಟ ಸಭೆಗೆ ಮುಂದೂಡಲಾಗಿದೆ.
ಸಂಪುಟ ಸಭೆಯ ತೀರ್ಮಾನಗಳೇನು?:
1. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅವರಾದಿ ಮತ್ತು ಇತರ 115 ಗ್ರಾಮಗಳಿಗೆ (136) ಮತ್ತು ಸವದತ್ತಿ ತಾಲೂಕಿನ 17 ಗ್ರಾಮಗಳಿಗೆ (23 ಜನವಸತಿಗಳು) ಜಲಜೀವನ್ ಮಿಷನ್ ಯೋಜನೆ ಅಡಿ ಬಹುಗ್ರಾಮ. ಕುಡಿಯುವ ನೀರು ಸರಬರಾಜಿನ 340 ಕೋಟಿ ರೂ. ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
2. ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಭೀಮನಕುಪ್ಪೆ ಗ್ರಾಮದ ಸರ್ವೆ ನಂ. 73ರಲ್ಲಿ ರಾಜೀವ್ ಗಾಂಧಿ ಸಾರ್ವಜನಿಕರ ಆರೋಗ್ಯ ಸಂಸ್ಥೆ ಮತ್ತು ರೋಗ ನಿಯಂತ್ರಣ ಕೇಂದ್ರ ಸುಧಾರಿತ ಸಂಶೋಧನಾ ಕೇಂದ್ರ ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡಗಳನ್ನು ರೂ. 200 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
3. ಪಿಪಿಪಿ-ಬಿಓಟೆ-ವಿಜಿಎಫ್ ಟೋಲ್ ಆಧಾರದಡಿ ಧಾರವಾಡ-ಅಳ್ಳಾವರ-ರಾಮನಗರ ರಾಜ್ಯ ಹೆದ್ದಾರಿ-34 ರ ಯೋಜನಾ ರಸ್ತೆಯಲ್ಲಿ 2 ROBಗಳ ಬಾಕಿ ಉಳಿದಿರುವ do.28.31 ಕೋಟಿಗಳ ಮೊತ್ತದ ಕಾಮಗಾರಿಗಳನ್ನು ರೈಲ್ವೆ ಸಚಿವಾಲಯ ಮತ್ತು ರಾಜ್ಯ ಕೆಆರ್‌ಡಿಸಿಎಲ್ 50:50 ಅನುಪಾತದಡಿ ವತಿಯಿಂದ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
4. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ 2021-22ನೇ ಸಾಲಿಗೆ IEBR ರೂ. 350 ಕೋಟಿಗಳ ಸಾಲ ಪಡೆಯಲು ಸರ್ಕಾರಿ ಖಾತರಿ.
5. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೋತನಹಿಪ್ಪರಗಾ ಗ್ರಾಮದ ಹತ್ತಿರ ಸಣ್ಣ ನೀರಾವರಿ ಹೊಸ ಕರ ನಿರ್ಮಾಣ ಕಾಮಗಾರಿಯ 14 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
6. ಕಲಬುರಗಿ ಜಿಲ್ಲೆ, ಆಳಂದ ತಾಲೂಕಿನ ಕವಲಗಾ ಗ್ರಾಮದ ಹತ್ತಿರ ಸಣ್ಣ ನೀರಾವರಿ ಹೊಸ ಕೆರೆ ನಿರ್ಮಾಣ ಕಾಮಗಾರಿಯ 16 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
7. ಕೊಪ್ಪಳ ತಾಲೂಕಿನ ಮಾದನೂರು ಮತ್ತು ದೇವಲಾಪುರ ನಡುವೆ ಹರಿಯುವ ಹಿರೇಹಳ್ಳಕ್ಕೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ರೂ.12.36 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ.
8. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಉಳುವರ ಮತ್ತು ಸಗಡಗೇರಿವರೆಗೆ ಖಾರ್ ಲ್ಯಾಂಡ್ ನಿರ್ಮಾಣ ಕಾಮಗಾರಿಯನ್ನು 13 ಕೋಟಿ ರೂ.ನಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
9. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಹತ್ತಿರ ಖಾರ್‌ಲ್ಯಾಂಡ್ ನಿರ್ಮಾಣ ಮತ್ತು ಗಂಗೆಕೊಳ್ಳದ ಹತ್ತಿರ SWED ನಿರ್ಮಾಣ ಕಾಮಗಾರಿಯನ್ನು ರೂ.16 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
10. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಣಸಗಿರಿ ಹತ್ತಿರ ಖಾರ್‌ಲ್ಯಾಂಡ್ ಬಂಡ್ ನಿರ್ಮಾಣ ಕಾಮಗಾರಿಯನ್ನು ರೂ.12 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
11. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಟುಳಿ ಪಡುವನಿ ಹತ್ತಿರ ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಯನ್ನು ರೂ.19 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
12. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಳಬಾಗಿಲು ಮತ್ತು ಇತರೆ 1616 ಜನವಸತಿಗಳಿಗೆ DBOT ಆಧಾರದ ಮೇಲೆ ಜಲ್ ಜೀವನ್ ಮಿಷನ್ ಯೋಜನೆ ಅಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 274 ಕೋಟಿಗಳ ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
13. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಮತ್ತು ಇತರೆ 41 ಗ್ರಾಮಗಳ ಹಂತ-1 DBOT ಆಧಾರದ ಮೇಲೆ ಜಲ್ ಜೀವನ್ ಮಿಷನ್ ಯೋಜನೆ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ರೂ. 44 ಕೋಟಿಗಳ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
14. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) 2022 ವಿಧೇಯಕಕ್ಕೆ ಅನುಮೋದನೆ.
15. ಗ್ರಾಮ-1 ಯೋಜನೆಯನ್ನು ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಗಳಿಗೆ ವಿಸ್ತರಿಸಲು ಅನುಮೋದನೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಂದ ಮೇಲ್ವಿಚಾರಕರ ಬಡ್ತಿಗೆ ನಿಯಮ ಸರಳೀಕರಣಕ್ಕೆ ಒತ್ತಾಯ