ಬೆಂಗಳೂರು: ದೇಶದಲ್ಲಿ ಸೂಪರ್‌ನ್ಯೂಮರರಿ ಕೋಟಾ ಸೃಷ್ಟಿಸಿರುವುದೇ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ರಕ್ಷಿಸಲು ಆಗಿದೆ. ಆದರೆ, ಅದೇ ಕೋಟಾದಡಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಗೆ ಬೋಧನಾ ಶುಲ್ಕ ಪಡೆದುಕೊಳ್ಳುವ ಮೂಲಕ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ ಹೈಕೋರ್ಟ್ ಅರ್ಜಿದಾರರ ಪರವಾಗಿ ಒಂದು ಲಕ್ಷ ರೂ. ದಂಡ ಠೇವಣಿ ಇಡುವಂತೆ ಸೂಚನೆ ನೀಡಿದೆ.
ಸೂಪರ್ ನ್ಯೂಮರರಿ ವಿದ್ಯಾರ್ಥಿಗೆ ಶುಲ್ಕ ವಿಧಿಸುವ ಮೂಲಕ ಕಾಲೇಜು ವ್ಯವಸ್ಥಿತ ತಾರತಮ್ಯ ಅನುಸರಿಸಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಬೋಧನಾ ಶುಲ್ಕವನ್ನಾಗಿ ಪಡೆದುಕೊಂಡಿದ್ದ 91,600 ರೂ.ಗಳನ್ನು ಆದೇಶದ ಪ್ರತಿ ಸಿಕ್ಕ ಎರಡು ವಾರಗಳಲ್ಲಿ ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದೆ.
ವಿದ್ಯಾರ್ಥಿನಿ ಆದಿತ್ಯ ದೀಪಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯಪೀಠ, ಸಂವಿಧಾನದ ಪರಿಚ್ಛೇದ 15(6) ಮತ್ತು 16(6)ಕ್ಕೆ ತಿದ್ದುಪಡಿ ಮಾಡಿರುವುದು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಒದಗಿಸುವುದಾಗಿದೆ. ಆದರೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಕಾಲೇಜು ಪರೋಕ್ಷವಾಗಿ ಬೋಧನಾ ಶುಲ್ಕ ವಿಧಿಸುವ ಮೂಲಕ ಈ ಪರಿಚ್ಛೇದ ಉಲ್ಲಂಘಿಸಿದೆ ಎಂದು ಅಭಿಪ್ರಾಯ ಪಟ್ಟಿದೆ.
ಸುಪ್ರೀಂಕೋರ್ಟ್ ಇಡಬ್ಲೂಎಸ್ ಮೀಸಲು ನೀತಿಯನ್ನು ಎತ್ತಿಹಿಡಿದಿದೆ. ಜಾತಿ ಹೊರತುಪಡಿಸಿ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಗುರುತಿಸಿ ಮೀಸಲು ಒದಗಿಸಬೇಕಾಗಿದೆ ಎಂದು ಹೇಳಿದೆ. ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ಇದ್ದ ಮೀಸಲು ನೀತಿಯನ್ನು ಬದಲಾಯಿಸಿದೆ. ಐತಿಹಾಸಿಕವಾಗಿ ಹಿಂದುಳಿದ ಜಾತಿ ಆಧಾರಿತ ಸಮುದಾಯಗಳನ್ನು ಸಾಮಾಜಿಕ ದೌರ್ಜನ್ಯ, ತಾರತಮ್ಯದಿಂದ ದೂರ ಮಾಡುವುದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಆ ಕಾಲೇಜಿಗೆ ಶೋಕಾಸ್ ನೋಟಿಸ್ ನೀಡಬೇಕು ಮತ್ತು ಸೂಪರ್ ನ್ಯೂಮರರಿ ಕೋಟಾದ ವಿದ್ಯಾರ್ಥಿಯಿಂದ ಅಕ್ರಮವಾಗಿ ಟ್ಯೂಷನ್ ಫೀ ಸಂಗ್ರಹ ಮಾಡಿದ್ದಕ್ಕಾಗಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆದೇಶ ನೀಡಿದೆ.
ಅಲ್ಲದೆ, 8ನೇ ಸೆಮಿಸ್ಟರ್ ಅಂಕ ಪಟ್ಟಿ ಮತ್ತು ವರ್ಗಾವಣೆ ಪತ್ರ(ಟಿಸಿ) ಕಾನ್ವೊಕೇಷ್ ಪ್ರಮಾಣ ಪತ್ರ ಮತ್ತು ಪದವಿ ಪ್ರಮಾಣ ಪತ್ರವನ್ನು ಹಿಂದಿರುಗಿಸುವಂತೆ ಅಕಾಡೆಮಿ ಫಾರ್ ಟೆಕ್ನಿಕಲ್ ಅಂಡ ಮ್ಯಾನೇಜ್ಮೆಂಟ್ ಎಕ್ಸಲೆನ್ಸ್ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜನಿಯರಿಂಗ್(ಬಿಇ) ಕೋರ್ಸ್ಗೆ ಸಿಇಟಿ ಪರೀಕ್ಷೆಯ ಮೂಲಕ ಮೈಸೂರಿನ ಅಕಾಡೆಮಿ ಫಾರ್ ಟೆಕ್ನಿಕಲ್ ಅಂಡ ಮ್ಯಾನೇಜ್ಮೆಂಟ್ ಎಕ್ಸಲೆನ್ಸ್ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದರು.
ಅಲ್ಲದೇ, ಅತಿ ಹೆಚ್ಚು ಅಂಕ ಗಳಿಸಿದ ಪರಿಣಾಮ ಬೋಧನ ಶುಲ್ಕ ಶೂನ್ಯದ ಆಧಾರದಲ್ಲಿ ಆಯ್ಕೆಯಾಗಿದ್ದರು. ಅಲ್ಲದೇ, ಕಾಲೇಜಿನ ಬೋಧನಾ ಶುಲ್ಕವನ್ನು ಹೊರತು ಪಡಿಸಿ ಇತರ ಶುಲ್ಕಗಳು ಪಾವತಿ ಮಾಡುವುದು ಕಡ್ಡಾಯವಾಗಿತ್ತು.
ಈ ನಡುವೆ ಅರ್ಜಿದಾರರ ಶೈಕ್ಷಣಿಕ ತೋರಿದ ಪ್ರದರ್ಶನದಿಂದಾಗಿ ಶಿಷ್ಯವೇತನ ಮಂಜೂರಾಗಿತ್ತು. ಸ್ಕಾಲರ್ಶಿಪ್ನ್ನು ಪಡೆದುಕೊಳ್ಳುವ ಸಲುವಾಗಿ ಕಾಲೇಜಿಗೆ ಹೋಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸ್ಕಾಲರ್ಶಿಫ್ ಮೊತ್ತವನ್ನು ಬೋಧನಾ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿತ್ತು. ಅಲ್ಲದೆ, ಅಂಕ ಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರ ಹಿಂದಿರುಗಿಸಲು ನಿರಾಕರಿಸಿದ್ದರು.
ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: ಚಿಕ್ಕೋಡಿಯಲ್ಲಿ ಸಿಐಡಿ ತನಿಖೆ ಚುರುಕು