ಬೆಂಗಳೂರು: ಬಜರಂಗದಳ ಬೆಂಬಲಕ್ಕೆ ನಿಂತಿರುವ ಬಿಜೆಪಿಯವರಿಗೆ ಹನುಮಾನ್ ಚಾಲೀಸಾ ಹೇಳಲು ಬರುತ್ತಾ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಹನುಮಾನ್ ಸ್ಪೆಲ್ಲಿಂಗ್ ಗೊತ್ತಿಲ್ಲ, ಮೊದಲು ಅವರು ತಮ್ಮ ಟ್ವಿಟರ್ ನಲ್ಲಿ ಸ್ಪೆಲ್ಲಿಂಗ್ ಸರಿಪಡಿಸಿಕೊಳ್ಳಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸುರ್ಜೇವಾಲಾ ಅವರು ಬಿಜೆಪಿಯವರಿಗೆ ಹನುಮಾನ್ ಚಾಲೀಸಾ ಬರಲ್ಲ ಅಂದಿದಾರೆ, ನಿನ್ನೆ ಅದಕ್ಕೆ ಹನುಮಾನ್ ಚಾಲೀಸಾ ಪಠಣದ ಮೂಲಕವೇ ಉತ್ತರಿಸಿದ್ದೇವೆ. ಆದರೆ ನಮ್ಮನ್ನು ಪ್ರಶ್ನಿಸಿ ಸವಾಲು ಹಾಕಿದ್ದ ಸುರ್ಜೇವಾಲಾ ಅವರಿಗೆ ಹನುಮಾನ್ ಸ್ಪೆಲ್ಲಿಂಗ್ ಗೊತ್ತಿಲ್ಲ, ಅವರು ಮೊದಲು ತಮ್ಮ ಟ್ವೀಟ್ ನಲ್ಲಿ ಹನುಮಾನ್ ಸ್ಪೆಲ್ಲಿಂಗ್ ಸರಿ ಮಾಡ್ಕೊಳ್ಳಲಿ ನಂತರ ನಮ್ಮ ಬಗ್ಗೆ ಮಾತಾಡಲಿ ಎಂದು ಸ್ಮೃತಿ ಇರಾನಿ ಟಕ್ಕರ್ ನೀಡಿದರು.
ಬಜರಂಗದಳ ನಿಷೇಧ ವಿಚಾರಕ್ಕೆ ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿ, ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಈಗ ಕಾಂಗ್ರೆಸ್‌ನ ನಾಯಕ ಹನುಮಂತನ ದೇವಸ್ಥಾನ ಕಟ್ಟುವ ಬಗ್ಗೆ ಹೇಳಿದ್ದಾರೆ. ಅವರಿಗೆ ಇದ್ದಕಿದ್ದಂತೆ ಬಜರಂಗ ಬಲಿ ಮೇಲೆ ಇಷ್ಟು ಪ್ರೀತಿ ಯಾಕೆ? ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅವರು ರಾಮನ ಅಸ್ತಿತ್ವ ನಿರಾಕರಿಸಿದ್ದರು. ಈಗ ಬಜರಂಗದಳ ನಿಷೇಧ ಬಗ್ಗೆ ಮಾತಾಡಿ ಬಜರಂಗಿಗಳಿಗೆ, ಹಿಂದೂಗಳಿಗೆ ನೋವುಂಟು ಮಾಡಿದ್ದಾರೆ. ಹನುಮಂತ ರಾವಣನ ಲಂಕೆ ಸುಟ್ಟವನು ಅಂತ ಕಾಂಗ್ರೆಸ್‌ನವರಿಗೆ ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಭರವಸೆಯಲ್ಲಿ ಮೂರು ಉಚಿತ ಸಿಲಿಂಡರ್ಗೆ ಕಾಂಗ್ರೆಸ್ ಟೀಕೆ ವಿಚಾರವನ್ನು ಖಂಡಿಸಿದ ಸ್ಮೃತಿ ಇರಾನಿ, ಬಿಜೆಪಿಯು ಉಜ್ವಲಾ ಯೋಜನೆಯಡಿ 12 ಉಚಿತ ಸಿಲಿಂಡರ್ ಕೊಡುತ್ತಿದೆ. 200 ರೂ ಸಬ್ಸಿಡಿ ಕೊಡುತ್ತಿದೆ ಇದರ ಬಗ್ಗೆ ಕಾಂಗ್ರೆಸ್ ಬೇಕು ಅಂತಲೇ ಚರ್ಚೆ ಮಾಡುತ್ತಿಲ್ಲ ಬಿಜೆಪಿ ಸಿಲಿಂಡರ್ ಸಬ್ಸಿಡಿಗೆ 13,900 ಕೋಟಿ ರೂ ಕೊಟ್ಟಿದೆ ಇದೆಲ್ಲ ಕಾಂಗ್ರೆಸ್ ಗೊತ್ತಿದ್ದೂ ಮರೆಸಿ ಮಾತಾಡ್ತಿದೆ ಎಂದರು.
ಎನ್‌ಇಪಿ ಬಗ್ಗೆ ಕಾಂಗ್ರೆಸ್ಗೆ ಯಾಕೆ ಇಷ್ಟು ಸಿಟ್ಟು - ಸ್ಮೃತಿ ಇರಾನಿ: ಕಾಂಗ್ರೆಸ್ ನಿಂದ ಬಿಜೆಪಿ ವಿರುದ್ಧ ಪತ್ರಿಕಾ ಜಾಹೀರಾತು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸ್ಮೃತಿ ಇರಾನಿ, ಜಾಹೀರಾತು ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್‌ನ ಪ್ರಣಾಳಿಕೆ ಸುಳ್ಳು ಹೇಳುವುದಾಗಿದೆ, ಎನ್‌ಇಪಿ ಜಾರಿ ವಾಪಸ್ ಪಡೆಯಬಹುದಾಗಿ ಅದರಲ್ಲಿದೆ. ಆದರೆ, ಎನ್‌ಇಪಿ ಬಗ್ಗೆ ಕಾಂಗ್ರೆಸ್ಗೆ ಯಾಕೆ ಇಷ್ಟು ಸಿಟ್ಟು? ಯಾವುದೇ ಸರ್ಕಾರ ಶಿಕ್ಷಣ ನೀತಿ ರಚಿಸಿದರೂ ಅದು ರಾಷ್ಟ್ರೀಯತೆಯ ಪ್ರತಿಬಿಂಬ ಆಗಿರಬೇಕಾಗುತ್ತದೆ ಎಂದರು.
ಬಿಜೆಪಿ ಪ್ರಣಾಳಿಕೆಯು ಕರ್ನಾಟಕ ಮಹಿಳೆಯರ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ, ನವ ಭಾರತದ ನಿರ್ಮಾಣಕ್ಕೆ ಬಲಿಷ್ಠ ಕರ್ನಾಟಕ ರೂಪಿಸಲು ಜನರ ಒಳಗೊಳ್ಳುವಿಕೆಯೊಂದಿಗೆ ಪ್ರಣಾಳಿಕೆ ಸಿದ್ಧ ಪಡಿಸಲಾಗಿದೆ. ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ಅರ್ಧ ಲೀಟರ್ ಹಾಲು, ಪ್ರತಿ ತಿಂಗಳು 5 ಕೆ.ಜಿ. ಸಿರಿಧಾನ್ಯ ವಿತರಣೆ ಸೇರಿವೆ. ರಾಜ್ಯದಲ್ಲಿ 54 ಲಕ್ಷ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ರೂ. ಪಡೆಯುತ್ತಿದ್ದಾರೆ. ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ. ನೀಡಲಾಗುತ್ತಿದೆ ಎಂದು ವಿವರಿಸಿದರು.
10 ಲಕ್ಷ ಮಕ್ಕಳಿಗೆ 2 ಲಕ್ಷ ಗರ್ಭಿಣಿಯರಿಗೆ ಜೀವ ಅಪಾಯದ ಕಾಯಿಲೆ ನಿರೋಧಕ ಲಸಿಕೆ ನೀಡಲಾಗಿದೆ. 19.5 ಲಕ್ಷ ಗರ್ಭಿಣಿಯರಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನಗದು ನೀಡಲಾಗಿದೆ. ಲಿಂಗಸಮಾನತೆ ಸಾಧಿಸುವಲ್ಲಿ ಸರ್ಕಾರದ ಯೋಜನೆಗಳು ಪ್ರಮುಖ ಕೊಡುಗೆ ನೀಡಲಿವೆ. ಕೆಲಸ ಮಾಡುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ದಾವಣಗೆರೆ, ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹಾಸ್ಟೆಲ್ಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಪ್ರಣಾಳಿಕೆ ಸುಳ್ಳುಗಳಿಂದ ಕೂಡಿದೆ - ಸ್ಮೃತಿ ಇರಾನಿ: ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಂಶವಿದ್ದು, ಮಹಿಳೆಯರನ್ನು ಸಮನಾಗಿ ಪರಿಗಣಿಸುವಲ್ಲಿ ಇದು ನೆರವಾಗಲಿದೆ ಎಂದು ಸ್ಮೃತಿ ಇರಾನಿ ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆ ಸುಳ್ಳುಗಳಿಂದ ಕೂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸುವುದಾಗಿ ಹೇಳಿದೆ. ಆದರೆ, ವರ್ಷಗಳ ಕಾಲ ನೀತಿ ರೂಪಿಸುವಲ್ಲಿ ಕಾಂಗ್ರೆಸ್‌ನ ಸಂಸದರು ಹಲವು ನಾಯಕರೂ ಇದ್ದರು. ಕಾಂಗ್ರೆಸ್ ಪಕ್ಷ ಸದಾ ಹಿಂದೂ ಜೀವನ ಕ್ರಮದ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ: ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ ಪವನ್ ಖೇರಾ