ಬೆಂಗಳೂರು: ಬಿಬಿಎಂಪಿಯ ಬಹು ದೊಡ್ಡ ಸಮಸ್ಯೆ ಎಂದರೆ ಕಸ ವಲೇವಾರಿ. ಈ ಸಮಸ್ಯೆಗೆ ಸ್ಪಲ್ಪ ಮಟ್ಟಿನ ಪರಿಹಾರ ಹುಡುಕುವ ಪ್ರಯತ್ನವನ್ನು ರಾಜಾಜಿನಗರದ ಶಾಪಿಂಗ್ ಸಮುಚ್ಚಯ ಒರಾಯನ್ ಮಾಲ್ ಮಾಡುತ್ತಿದೆ.
ಒರಾಯನ್ ಮಾಲ್ ಅಡುಗೆ ಮನೆಯ ಹಸಿತ್ಯಾಜ್ಯವನ್ನು ಉತ್ಪಾದಕ ಬಳಕೆಗಾಗಿ ವಿನೂತನ ಮಾರ್ಗ ಅನ್ವೇಷಿಸಿದೆ. ಆರ್ಗಾನಿಕ್ ಬಯೋ ಕನ್ವರ್ಟರ್ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುತ್ತಿದೆ. ಈ ಬಯೋ ಡಿಗ್ರೆಡೆಬಲ್ ಕನ್ವರ್ಟರ್ 2 ಟನ್ ಸಾಮರ್ಥ್ಯ ಹೊಂದಿದೆ. ಇದು ಸರಿ ಸುಮಾರು 300 ಕೆಜಿಯಷ್ಟು ಹಸಿತ್ಯಾಜ್ಯವನ್ನು ಸಂಗ್ರಹಿಸಿ ಪ್ರತಿದಿನ 75ಕೆಜಿ ಗೊಬ್ಬರ ಉತ್ಪಾದಿಸುತ್ತದೆ. ಹಸಿತ್ಯಾಜ್ಯದಿಂದ ಗೊಬ್ಬರವಾಗಿ ಪರಿವರ್ತಿಸುವ ಈ ಪ್ರಕ್ರಿಯೆಯು 15 ದಿನಗಳಷ್ಟು ಕಾಲಾವಧಿ ತೆಗೆದುಕೊಳ್ಳುತ್ತದೆ.
ಸಂಸ್ಕರಿಸಿದ ಸಾವಯವ ಗೊಬ್ಬರವನ್ನು ಬ್ರಿಗೇಡ್ ಪ್ರಾಪರ್ಟಿಸ್ ತೋಟಗಾರಿಕೆಗಾಗಿ ಬಳಸುತ್ತಿದೆ. ತ್ಯಾಜ್ಯದ ಸಂಗ್ರಹಣೆ, ಬೇರ್ಪಡಿಸುವಿಕೆಯಿಂದ ಕಸವನ್ನು ಪರಿವರ್ತಿಸುವರೆಗಿನ ಎಲ್ಲ ಕೆಲಸವನ್ನೂ ಇಲ್ಲಿ ಮಾಡಲಾಗುತ್ತಿದೆ. ಒರಾಯನ್ ಮಾಲ್ ಜಾಗೃತಿ ಮೂಡಿಸುವುದರ ಜತೆಗೆ ಪರಿಸರ ಸುಸ್ಥಿರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.
ತ್ಯಾಜ್ಯಗಳನ್ನು ಸುಡುವುದರ ಪರಿಣಾಮವೇನು?
ಪ್ರಪಂಚದಾದ್ಯಂತ ಶೇಕಡಾ 12ರಷ್ಟು ತ್ಯಾಜ್ಯವು ಪ್ಲಾಸ್ಟಿಕ್‌ನಿಂದ ಕೂಡಿದೆ. ವಿಶ್ವ ಆರೋಗ್ಯ ಸಂಘಟನೆ(WHO) ಪ್ರಕಾರ, ಜಗತ್ತಿನಲ್ಲಿ ಶೇಕಡಾ 40% ರಷ್ಟು ತ್ಯಾಜ್ಯವನ್ನು ಸುಡಲಾಗುತ್ತದೆ. ಈ ಕಸವನ್ನು ಸುಡುವುದರಿಂದ ಇದರಲ್ಲಿನ ರಾಸಾಯನಿಕ ವಾತಾವರಣ ಸೇರಿ ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸುವುದಲ್ಲದೇ, ಓಜೋನ್ ಪದರವನ್ನೂ ಹಾಳುಮಾಡುತ್ತದೆ ಎಂದು ಎಚ್ಚರಿಸಿದೆ.