ಬೆಂಗಳೂರು: ಮನೋಜ್ಞ ಅಭಿನಯದ ಮೂಲಕ ವೀಕ್ಷಕರ ಮನ ಗೆದ್ದ, ಮುದ್ದಾದ ನೋಟದ ಮೂಲಕ ಹೆಣ್ ಮಕ್ಕಳ ಮನ ಕದ್ದ ಚಾಕೋಲೇಟ್ ಹೀರೋ ಸ್ಕಂದ ಅಶೋಕ್ ರಾಧಾ ರಮಣ ಧಾರಾವಾಹಿಯ ರಮಣ್ ಆಗಿ ಕಿರುತೆರೆ ಲೋಕದಲ್ಲಿ ಕಮಾಲ್ ಮಾಡಿದ್ದರು. ಧಾರಾವಾಹಿ ಮುಗಿದು ಒಂದು ವರ್ಷ ಕಳೆಯುತ್ತಾ ಬಂದರೂ ಸ್ಕಂದ ಎಂದ ಕೂಡಲೇ ವೀಕ್ಷಕರಿಗೆ ನೆನಪಾಗುವುದು ರಮಣ್ ಪಾತ್ರ.
ರಾಧಾ ರಮಣ ಧಾರಾವಾಹಿಯ ನಂತರ ಬೆಳ್ಳಿತೆರೆಯಲ್ಲಿಯೇ ಬ್ಯುಸಿಯಾಗಿದ್ದ ಸ್ಕಂದ ಅಶೋಕ್, ಇದೀಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸರಸು' ವಿನಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಚಿಕ್ಕಮಗಳೂರಿನ ಹ್ಯಾಂಡ್ಸಮ್ ಹುಡುಗ ಸ್ಕಂದ ಅಶೋಕ್ ನಟನಾಗಿ ಗುರುತಿಸಿಕೊಳ್ಳುವ ಮೊದಲೇ ಟಿವಿ ಹಾಗೂ ಮುದ್ರಣ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿದ್ದರು. ಸ್ಕಂದ ಅವರು ಇಂದು ನಟರಾಗಿ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣವೂ ಒಂದಿದೆ. ಜನರ ಕೂಗು, ತುಂಬು ಮನಸ್ಸಿನಿಂದ ಜನರು ಆಡುವ ಪ್ರಶಂಸೆಯ ಮಾತು ಕಂಡ ಸ್ಕಂದ ತಾನು ಕೂಡಾ ಆ ಜನರ ಪ್ರಶಂಸೆಗೆ ದನಿಯಾಗಬೇಕು ಎಂದು ಬಯಸಿದ್ದರು. ಜೊತೆಗೆ ಜನರು ತನ್ನನ್ನು ಗುರುತಿಸುವಂತೆಯೂ ಆಗಬೇಕು ಎಂಬ ಬಯಕೆ ಅವರಿಗಿತ್ತು. ಇದೀಗ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಸ್ಕಂದ ಅಶೋಕ್ ಜನರ ಪ್ರಶಂಸೆಗೆ ಪಾತ್ರವಾಗುವ ಮೂಲಕ ತಮ್ಮ ಬಯಕೆಯನ್ನು ಪರಿಪೂರ್ಣ ಮಾಡಿದ್ದಾರೆ.
ನಟನಾ ವೃತ್ತಿ ಆರಂಭಿಸಿದ್ದು ಹಿರಿತೆರೆಯ ಮೂಲಕ!
ರಾಧಾ ರಮಣ ಧಾರಾವಾಹಿಯ ನಂತರ ಸರಸು ಧಾರಾವಾಹಿಯ ಮೂಲಕ ಮತ್ತೊಮ್ಮೆ ಕಿರುತೆರೆಗೆ ಕಂಬ್ಯಾಕ್ ಮಾಡಲಿರುವ ಸ್ಕಂದ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಹಿರಿತೆರೆ. ಮಲಯಾಳಂ ನೋಟ್ ಬುಕ್ ಸಿನಿಮಾದ ಮೂಲಕ ನಟನಾ ಯಾನ ಶುರು ಮಾಡಿದ ಸ್ಕಂದ ಮೊದಲ ಸಿನಿಮಾಕ್ಕೆ ಏಷಿಯಾ ನೆಟ್ ಫಿಲಂ ನೀಡುವ ಹೊಸ ಮುಖ ಅವಾರ್ಡ್ ಪಡೆದುಕೊಂಡಿದ್ದಾರೆ. ಮುಂದೆ ಎಲೆಕ್ಟ್ರಾ, ತಮಿಳಿನ ಅಂಗುಸ್ಯಂ, ಮುಪ್ಪರಿಮಾನಂ ನ ಜೊತೆಗೆ ತೆಲುಗಿನ ಮಲ್ಲಿ ಮಲ್ಲಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಚಾರುಲತಾ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಸ್ಕಂದ ಯೂ ಟರ್ನ್ ನ ಜೊತೆಗೆ ಕಾನೂರಾಯಣ, ದೇವಯಾನಿ, ಭೈರಾದೇವಿ ಮತ್ತು ರಣಾಂಗಣ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.