ಬೆಂಗಳೂರು: ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ 6 ಜನರ ಗ್ಯಾಂಗ್ವೊಂದನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನೀಲ್ ಡಿ., ರೂಪಂ, ಭಟ್ಟಾಚಾರ್ಯ ಹಾಗೂ ರವಿ ಬಂಧಿತರು.
ಪ್ರವೀಣ್ ಮೊಬೈಲ್ ಸೆಂಟರ್ ನಡೆಸುತ್ತಿದ್ದ ಆರೋಪಿ. ಈತ ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಟ್ಟುಕೊಳ್ಳುತ್ತಿದ್ದ. ಆಧಾರ್ ಬೇಕಿರುವವರ ಮಾಹಿತಿ ಪಡೆದು ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸುತ್ತಿದ್ದ. ಎರಡನೇ ಆರೋಪಿ ರಮೇಶ್ ಆಟೋ ಚಾಲಕ. ಈತ ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ ಕರೆದೊಯ್ಯುತ್ತಿದ್ದ. ಮತ್ತೋರ್ವ ಆರೋಪಿ ಸುನಿಲ್.ಡಿ, ಈತ ಪ್ರೈಮರಿ ಹೆಲ್ತ್ ಸೆಂಟರ್ನ ನಿವೃತ್ತ ವೈದ್ಯ. ನಿವೃತ್ತಿ ನಂತರವೂ ಗೆಜೆಟೆಡ್ ಸೀಲ್ನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಪ್ರವೀಣ್ ಕಳಿಸುವವರ ಅಪ್ಲಿಕೇಶನ್ ಪಡೆದು ಸೀಲ್ ಸಹಿ ಹಾಕಿ ಕೊಡುತ್ತಿದ್ದ.
ಇದನ್ನೂ ಓದಿ:ನಕಲಿ ಫಿಂಗರ್ ಪ್ರಿಂಟ್ ಜಾಲ: ನಾಲ್ವರು ಆರೋಪಿಗಳ ಬಂಧನ
ನಾಗರಾಜ್ ಖಾಸಗಿ ಬ್ಯಾಂಕ್ ಉದ್ಯೋಗಿ, ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಈ ಸ್ಕ್ಯಾನರ್ ದುರ್ಬಳಕೆ ಮಾಡಿಕೊಳ್ತಿದ್ದ. ಸ್ಕ್ಯಾನ್ ಮಾಡಿ ನಕಲಿ ದಾಖಲಾತಿಗಳ ಸಹಿತ ಆಧಾರ್ ಫಾರ್ಮ್ ಅಪ್‌ಲೋಡ್ ಮಾಡುತ್ತಿದ್ದ. 5ನೇ ಆರೋಪಿ ರೂಪಂ ಭಟ್ಟಾಚಾರ್ಜಿ,ಈತ ಓರಿಸ್ಸಾ ಮೂಲದವನು. ಗಾರ್ಮೆಂಟ್ಸ್ನಲ್ಲಿ ಸೂಪರ್ವೈಸರ್ ಕೆಲಸ ಮಾಡಿಕೊಂಡಿದ್ದ. ಸಂಬಳ ಪಡೆಯಲು ಕಡ್ಡಾಯವಾಗಿರುವುದರಿಂದ ಆಧಾರ್ ಬೇಕಿರುವವರನ್ನ ಪ್ರವೀಣ್ಗೆ ರೆಫರ್ ಮಾಡುತ್ತಿದ್ದ. ಇನ್ನು ರವಿ ಸರ್ಕಾರಿ ಆಸ್ಪತ್ರೆಯ ಉದ್ಯೋಗಿ, ಆಧಾರ್ ಅಗತ್ಯವಿರುವವರನ್ನ ಪ್ರವೀಣ್ ಬಳಿ ಕಳಿಸಿಕೊಡ್ತಿದ್ದ. ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಸಾಮಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಬೊಮ್ಮನಹಳ್ಳಿ ಪೊಲೀಸರು, ಎಲ್ಲರನ್ನು ಬಂಧಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ
ಸೀಲ್, ಪ್ರಿಟಿಂಗ್ ಮಷಿನ್ ವಶಕ್ಕೆ: ಪ್ರತಿಯೊಬ್ಬರಿಗೂ ಆಧಾರ್ ಕಡ್ಡಾಯ. ಕೆಲವರು ಅನಿವಾರ್ಯ ಕೆಲಸಗಳಿಂದ ಓಡಾಡಿ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಜನರನ್ನು ಈ ಖದೀಮರು ಟಾರ್ಗೆಟ್ ಮಾಡುತ್ತಿದ್ದರು. ದಾಖಲೆ ಇಲ್ಲದ ಕೆಲವರು ಸುಲಭವಾಗಿ ಇವರ ಬಲೆಗೆ ಬೀಳುತ್ತಿದ್ದರು. ಸದ್ಯಕ್ಕೆ ಆರು ಜನ ಖತರ್ನಾಕ್ ಅಸಾಮಿಗಳನ್ನ ಬಂಧಿಸಲಾಗಿದ್ದು, ಸೀಲ್, ಪ್ರಿಂಟಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.