ಬೆಂಗಳೂರು: ಬಿಜೆಪಿ ಆಡಳಿತದ ಎಲ್ಲ ಹಗರಣಗಳನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ತನಿಖೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ಹಿಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿತ್ತು. ನಾವು ವಿರೋಧ ಪಕ್ಷದಲ್ಲಿದ್ದಾಗ ಯಾವೆಲ್ಲ ಹಗರಣಗಳನ್ನು ತನಿಖೆ ಮಾಡ್ತೇವೆ ಎಂದು ಹೇಳಿದ್ದೆವು. ಆ ಎಲ್ಲ ಹಗರಣಗಳನ್ನು ಎಸ್‌ಐಟಿ ಮೂಲಕ ತನಿಖೆ ಮಾಡುವ ಕುರಿತಾಗಿ ಚರ್ಚಿಸಿದ್ದೇವೆ. ಮುಂದಿನದ್ದು ಸಿಎಂ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಅಕ್ಕಿ ವಿತರಣೆ ಬಗ್ಗೆ ಬಿಜೆಪಿ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಪ್ರಚಾರಪ್ರಿಯರು. ಅವರು ಗೌರವಯುತವಾಗಿ ಇರಬೇಕು. ಚೇಷ್ಟೆ ಮಾಡಿದರೆ ಜನ ಪಾಠ ಕಲಿಸುತ್ತಾರೆ. ನಾನು ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್ ಅವರಿಗೆ ಅವರ ಪ್ರಣಾಳಿಕೆ ಕಳಿಸುತ್ತೇನೆ. ಕೊಟ್ಟ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರಾ?. ಉದ್ಯೋಗ ಕೊಡುತ್ತೇವೆ, ಐದಿನೈದು ಲಕ್ಷ ರೂ ಕೊಡ್ತೇವೆ ಎಂದರು, ಆದ್ರೆ ಕೊಡಲಿಲ್ಲ. ಬಿಜೆಪಿಯವರಿಂದ ನಾವು ಕಲಿಯಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಕ್ತಿ ಯೋಜನೆಯಿಂದ ನಿಗಮಕ್ಕೆ ಶಕ್ತಿ ಬಂದಿದೆ. ನಿಗಮಗಳ ಆದಾಯ ಹೆಚ್ಚಳ ಆಗಿದೆ. ಸರ್ಕಾರಕ್ಕೆ ಶಕ್ತಿ ಬಂದಿದೆ, ಸಾರಿಗೆ ನಿಗಮಕ್ಕೂ ಶಕ್ತಿ ಬಂದಿದೆ. ನಮ್ಮ ಪಕ್ಷಕ್ಕೂ ಶಕ್ತಿ ಬಂದಿದೆ. ಇದರಿಂದ ಬಿಜೆಪಿಯವರು ನಿಶಕ್ತರಾಗಿದ್ದಾರೆ. ಬಿಜೆಪಿಯವರು ಮಹಿಳಾ ವಿರೋಧಿಗಳು. ನಮ್ಮ ಯೋಜನೆಗಳ ಬಗ್ಗೆ ಬಿಜೆಪಿಯವರಿಗೆ ಹೊಟ್ಟೆಉರಿ. ಸೇವಾ ಸಿಂಧುವಿನಲ್ಲಿ ಅಪ್ಲಿಕೇಶನ್ ಹಾಕಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಸದ್ಯದಲ್ಲೇ ಪೋರ್ಟಲ್ ಓಪನ್ ಆಗಲಿದೆ. ಯಾವುದಾದರೂ ಐಡಿ ಕಾರ್ಡ್ ಅಪ್ಲೋಡ್ ಮಾಡಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಸದ್ಯ ಮೂರು ತಿಂಗಳ ತನಕ ಐಡಿ ತೋರಿಸಿ ಪ್ರಯಾಣ ಮಾಡಬಹುದು ಎಂದರು.
ತನಿಖೆಗೆ ಸರ್ಕಾರ ನಿರ್ಧಾರ- ಸಚಿವ ಕೃಷ್ಣ ಭೈರೇಗೌಡ: ಇನ್ನೊಂದೆಡೆ, ನಿರ್ದಿಷ್ಟ ಪ್ರಕರಣಗಳನ್ನು ತನಿಖೆ ಮಾಡಿಯೇ ಮಾಡುತ್ತೇವೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಸ್ ಬೈ ಕೇಸ್ ಮಾಹಿತಿ ಪಡೆದು ತನಿಖೆ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಸಿಎಂ, ಡಿಸಿಎಂ ಕೂಡ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಭರವಸೆ ನೀಡಿದ್ದಾರೆ. ಸಾರಾಸಗಟಾಗಿ ಎಲ್ಲ ಪ್ರಕರಣಗಳನ್ನೂ ಕೂಡ ತನಿಖೆಗೆ ಒಳಪಡಿಸ್ತೇವೆ ಅಂತಲ್ಲ. ನಿರ್ದಿಷ್ಟ ಪ್ರಕರಣಗಳಲ್ಲಿ ಎಲ್ಲಿ ಲೋಪದೋಷಗಳಾಗಿವೆಯೋ ಅವನ್ನು ತನಿಖೆಗೆ ಒಳಪಡಿಸ್ತೇವೆ ಎಂದು ಹೇಳಿದರು.
ನಾಳೆಯಿಂದ ಬಿಜೆಪಿ ಅಕ್ಕಿ ಅಭಿಯಾನ ವಿಚಾರವಾಗಿ ಮಾತನಾಡಿ, ಅಧಿಕಾರ ಇದ್ದಾಗ ಒಂದೇ ಒಂದು ಬಡವನಿಗೆ ಬಿಜೆಪಿ ಸಹಾಯ ಮಾಡಲಿಲ್ಲ. ತಿಗಣೆಯಂತೆ ಬಡವರ ರಕ್ತ ಹೀರಿದವರು ಬಿಜೆಪಿಯವರು. ಈಗ ನಾವು ಬಡವರಿಗೆ ಸಹಾಯ ಮಾಡುವುದಕ್ಕೆ ಹೊರಟಾಗ ಅಡ್ಡಿಪಡಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ: ನೌಕಾನೆಲೆ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿಯುವ ಭೀತಿ; ಕಾರವಾರದ ನೂರಾರು ಕುಟುಂಬಗಳಲ್ಲಿ ಆತಂಕ