ಬೆಂಗಳೂರು: ದೇಶದ್ರೋಹ ಆರೋಪದಡಿ ಬಂಧನವಾಗಿರುವ ಅಮೂಲ್ಯ ಲಿಯೋನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಳೆ. ಆದರೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿದ್ದ ಸಂದರ್ಭದಲ್ಲಿ ಹಿರಿಯ ಪೊಲಿಸ್ ಅಧಿಕಾರಿಗಳ ಎದುರು, ಫ್ರೀಡಂ ಪಾರ್ಕ್ ಬಳಿ ತಾನು ದೇಶ ವಿರೋಧಿ ಘೋಷಣೆ ಕೂಗಿದ ಕೆಲ ವಿಚಾರಗಳ ಕುರಿತು ಹೇಳಿದ್ದಾಳೆ. ಯಾರು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ರು, ಕಾರ್ಯಕ್ರಮದ ಉದ್ದೇಶವೇನು ಎಂಬ ಕುರಿತು ಅಮೂಲ್ಯ ಮಾಹಿತಿ ಬಿಚ್ಚಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಹೀಗಾಗಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಕಾರ್ಯಕ್ರಮದ ಆಯೋಜಕರಿಗೆ ಸದ್ಯ ಕಂಟಕ ಎದುರಾಗಿದ್ದು, ಸದ್ಯದಲ್ಲೇ ಆಯೋಜಕರು ಬಂಧನವಾಗಲಿದ್ದಾರೆಂಬ ಮಾಹಿತಿಯನ್ನು ಉನ್ನತ ಮೂಲಗಳು ತಿಳಿಸಿವೆ.
ಈಟಿವಿ ಭಾರತ್ಗೆ ಪೊಲೀಸ್ ಉನ್ನತ ಮೂಲಗಳು ತಿಳಿಸಿದ ಪ್ರಕಾರ, ಅಮೂಲ್ಯಾಳಿಗೆ ಕಾರ್ಯಕ್ರಮಕ್ಕೆ ಬರುವಂತೆ ಅನುಮತಿ ಕೊಟ್ಟಿದ್ದೇ ಆಯೋಜಕರಂತೆ. ಈ ಹಿನ್ನೆಲೆ ಆಯೋಜಕರಿಗೆ ಶಾಕ್ ಕೊಡಲು ಪೊಲೀಸರು ಮುಂದಾಗಿದ್ದಾರೆ. ಫ್ರೀಡಂ ಪಾರ್ಕ್ ಬಳಿ ಕಾರ್ಯಕ್ರಮದ ಜವಾಬ್ದಾರಿಯನ್ನು ಕಾರ್ಪೋರೇಟರ್ ಇಮ್ರಾನ್ ಪಾಷಾ ಹೊತ್ತುಕೊಂಡಿದ್ದರು. ಪೊಲೀಸರ ಬಳಿ ಕಾರ್ಯಕ್ರಮಕ್ಕೆ ಅನುಮತಿ ಕೇಳಿದ್ದರು. ಹೀಗಾಗಿ ನೋಟಿಸ್ ನೀಡಿ ತನಿಖೆ ನಡೆಸಿದ್ದ ಸಂದರ್ಭದಲ್ಲಿ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ಹಾಗೆ ಪೊಲೀಸರು ಕೇಳಿದ ಪ್ರಶ್ನೆಗೆ ಸಮಂಜಸ ಉತ್ತರ ನೀಡಿರಲಿಲ್ಲವಂತೆ.
ಆದರೆ ತನಿಖೆ ವೇಳೆ ಅಮೂಲ್ಯಾ, ನಾನು ಕಾರ್ಯಕ್ರಮಕ್ಕೆ ಸುಮ್ಮನೆ ಹೋಗಿರಲಿಲ್ಲ. ಆಯೋಜಕರು ಆಹ್ವಾನ ನೀಡಿದ್ದಕ್ಕಾಗಿ ಹೋಗಿದ್ದು ಎಂದಿದ್ದಾರೆ. ಹಿಗಾಗಿ ಇದೇ ಆಧಾರದ ಮೇಲೆ ಆಯೋಜಕರನ್ನ ಪೊಲೀಸರು ಬಂಧನ ಮಾಡಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.