ಬೆಂಗಳೂರು: ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಬೆಳ್ಳಿಯ ಗಟ್ಟಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ, 16 ಕೆಜಿ ಬೆಳ್ಳಿಯ ಗಟ್ಟಿ ವಶಪಡಿಸಿಕೊಂಡಿದ್ದಾರೆ.
ಸೊಲ್ಲಾಪುರ ಮೂಲದ ಮಲ್ಲೇಶ್ವರ ನಿವಾಸಿಯಾಗಿದ್ದ ಬಾಪು ಬಂಧಿತ ಆರೋಪಿ. ಈತ ಶ್ರೀರಾಂಪುರ ಬಳಿಯ ಆರ್ಮುಗಂ ಸಿಲ್ವರ್ ವರ್ಕ್ ಫ್ಯಾಕ್ಟರಿಯಲ್ಲಿ ಬೆಳ್ಳಿ ಕರಗಿಸುವ ಕೆಲಸ ಮಾಡುತ್ತಿದ್ದ. ಬಾಪುಗೆ ಬೆಳ್ಳಿ ಕರಗಿಸಲು ಬೆಳ್ಳಿ ನೀಡುತ್ತಿದ್ದ ಸಮಯದಲ್ಲಿ ಆತ ಸ್ವಲ್ಪ ಸ್ವಲ್ಪ ಬೆಳ್ಳಿಯನ್ನು ಕಳ್ಳತನ ಮಾಡಿರುವುದಾಗಿ ಶ್ರೀರಾಮಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯು ಸುಮಾರು 1 ವರ್ಷದಿಂದ ಈ ರೀತಿಯ ಕೃತ್ಯವೆಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಮಾಲೀಕರಿಗೆ ಅನುಮಾನ ಬಂದು ಆತನಿಗೆ ತೂಕ ಮಾಡಿ ಬೆಳ್ಳಿಯನ್ನು ಕರಗಿಸಲು ನೀಡಿ, ಪುನಃ ಕರಗಿಸಿದ ನಂತರ ತೂಕವನ್ನು ಪರಿಶೀಲಿಸಿದಾಗ ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.