ಬೆಂಗಳೂರು : ಆರೋಗ್ಯ ಇಲಾಖೆಯ ಕಚೇರಿ ಆವರಣದಲ್ಲಿ ಎಐಟಿಯುಸಿ ಆಶಾ ಕಾರ್ಯಕರ್ತೆಯರ ಸಂಘಟನೆಯು ಮಾಸಿಕ ವೇತನ ₹12 ಸಾವಿರಕ್ಕೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಮೌನ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಗೆ ಪೊಲೀಸರು ಪರವಾನಗಿ ನೀಡದ ಹಿನ್ನೆಲೆ ಬೆರಳೆಣಿಕೆಯಷ್ಟು ಆಶಾ ಕಾರ್ಯಕರ್ತೆಯರು ಹಾಜರಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ಲಕ್ಕಾರ್ಡ್ಗಳನ್ನು ಹಿಡಿದು ಪ್ರತಿಭಟಿಸುತ್ತಿದ್ದಾರೆ. ಇದೇ ವೇಳೆ ಅವರು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಪ್ರಮಾಣದ ಸುರಕ್ಷತಾ ಕಿಟ್ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಒಂದು ವಾರದಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದರೂ ಸರ್ಕಾರ ಸ್ಪಂದಿಸದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟದ ಮುಂದಿನ ಹಂತವಾಗಿ ಇಡೀ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಕೆಲಸ ಬಹಿಷ್ಕಾರ ಮಾಡಲಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು, ರಾಜ್ಯದ ಸಚಿವರು ಹಾಗೂ ಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಚರ್ಚಿಸಲು ಸಭೆಯನ್ನು ಕರೆಯುವ ಪ್ರಸ್ತಾಪವನ್ನೂ ಸರ್ಕಾರ ಮುಂದಿಟ್ಟಿಲ್ಲ. ಇಂದು ಕೆಲಸ ಬಹಿಷ್ಕರಿಸಿ ರಾಜ್ಯದಾದ್ಯಂತ ಎಲ್ಲಾ ಡಿಸಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದೇವೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ತಿಳಿಸಿದರು.