ಬೆಂಗಳೂರು: ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಟಾಚಾರಕ್ಕೆ ಪ್ರಚಾರ ಮಾಡಿದಂತಾಯಿತು. ಭಾನುವಾರ ಸಾಯಂಕಾಲ 4 ಗಂಟೆಯಿಂದಲೇ ಶಿವಾಜಿನಗರದ ಹಲಸೂರು ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಶಾಂತಿನಗರ ಶಾಸಕ ಹ್ಯಾರಿಸ್ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯ ಅವರಿಗಾಗಿ ಕಾಯಬೇಕಾಯಿತು. ನಾಲ್ಕು ಗಂಟೆಗೆ ಶುರುವಾಗಬೇಕಿದ್ದ ಪ್ರಚಾರವನ್ನು, ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.
ಶಿವಾಜಿನಗರದ ಚೌಕ ರಸ್ತೆಯಿಂದ ಕಾಂಗ್ರೆಸ್ ರೋಡ್ ಶೋ ಶುರುವಾಗಿದ್ದು, ಹಲಸೂರು ಕೆರೆ ಬಳಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೋಡ್ ಶೋಗೆ ಜೊತೆಯಾದರು. ಅಲ್ಲದೇ ಅಲ್ಲಿಂದ ಹಲಸೂರಿನ ತಿರುವಳ್ಳುವರ್ ಪ್ರತಿಮೆವರೆಗೂ ಸುಮಾರು ಅರ್ಧ ಕಿಮೀ ತೆರೆದ ವಾಹನದಲ್ಲಿ ಬಂದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್, ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಂದು ಕ್ಷಣವೂ ಅಲ್ಲಿರದೇ ಜಾಗ ಖಾಲಿ ಮಾಡಿದರು. ಶಿವಾಜಿನಗರದಲ್ಲಿ ಮನೆಮನೆಗೂ ಪ್ರಚಾರಕ್ಕೆ ತೆರಳುವ ಸಿದ್ದತೆಯಲ್ಲಿದ್ದ ರಿಜ್ವಾನ್, ಈ ಕಾರಣದಿಂದಾಗಿ ಅರ್ಧಕ್ಕೆ ತಮ್ಮ ಪ್ರಚಾರವನ್ನು ಮೊಟಕುಗೊಳಿಸಿದರು.
ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ ಮಾಡಿದ್ದ ಸಿದ್ದರಾಮಯ್ಯ, ಶಿವಾಜಿನಗರದಲ್ಲಿ ಮಾತ್ರ ಕಾಟಾಚಾರದ ಪ್ರಚಾರ ಮಾಡಿದ್ದಾರೆ. ಕೈ ನಾಯಕರು ಶಿವಾಜಿನಗರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಇದರಿಂದ ಮೇಲ್ನೋಟಕ್ಕೆ ಕಾಣುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.