ಬೆಂಗಳೂರು: ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದವರು. ಆದರೆ, ಅವರ ರಾಜಕೀಯ ಜೀವನದಲ್ಲಿ ಯಾರನ್ನೂ ಬೆಳೆಸುವುದಿಲ್ಲ. ಅವರ ಕುಟುಂಬವನ್ನು ಹೊರತುಪಡಿಸಿ, ಸ್ವಜಾತಿಯವರನ್ನೂ ಬೆಳೆಸುವುದಿಲ್ಲ ಎಂದು ಸಿದ್ದರಾಮಯ್ಯ ದೇವೇಗೌಡರ ವಿರುದ್ದ ಗುಡುಗಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ನಾನು ಸರ್ಕಾರಗಳನ್ನು ಬೀಳಿಸುವ ನೀಚ ಕೆಲಸ ಮಾಡುವುದಿಲ್ಲ. ಅದೆಲ್ಲ ಜೆಡಿಎಸ್ ಹಾಗೂ ದೇವೇಗೌಡರ ಕೆಲಸ. ನೀಚ ಕೆಲಸ ಮಾಡುವುದು ಅವರ ಕಾಯಕ ಎಂದು ತಿರುಗೇಟು ನೀಡಿದ್ದಾರೆ.
ದೇವೇಗೌಡರು ನಿನ್ನೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು. ಕುಮಾರಸ್ವಾಮಿ ಅವರ ಏಕಪಕ್ಷೀಯ ನಿರ್ಧಾರಗಳು ಹಾಗೂ ಅಸಡ್ಡೆ ಸರ್ಕಾರ ಬೀಳಲು ಕಾರಣವಾಗಿದೆ ಎಂದು ಪ್ರತಿದಾಳಿ ನಡೆಸಿದರು.
ಬಿಜೆಪಿಯವರು ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಸರ್ಕಾರ ಮಾಡಬೇಕು ಎಂದು ಈ ಹಿಂದೆ ಬಿಜೆಪಿ ಜತೆಗಿನ ಸರ್ಕಾರ ರಚನೆ ಮುನ್ನ ದೇವೇಗೌಡರು ಹೇಳಿದ್ದರು. ಆದರೆ ಮುಂದೇನಾಯ್ತು? ರಾಜ್ಯದ ಜನ ನೋಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಉರುಳಲು ರೇವಣ್ಣ ಅವರ ಹಸ್ತಕ್ಷೇಪ ಕಾರಣ ಎಂದು ಶಾಸಕರು ಆರೋಪಿಸುತ್ತಿದ್ದಾರೆ. ಇನ್ನು ಎಲ್ಲಾ ಎಂಎಲ್ಎಗಳು ಕುಮಾರಸ್ವಾಮಿ ಹಾಗೂ ದೇವೇಗೌಡರೇ ಸರ್ಕಾರ ಬೀಳಲು ಕಾರಣ ಎಂದು ಅವರು ಹೇಳುತ್ತಿದ್ದಾರೆ. ಹಾಗಾಗಿ ಸರ್ಕಾರ ಪತನಕ್ಕೆ ನಾನು ಕಾರಣನಾಗಲಾರೆ ಎಂದು ಸಿದ್ದು ಸ್ಪಷ್ಟಪಡಿಸಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಂಎಲ್ಎಗಳು ಕೆಲಸ ಮಾಡಿಕೊಟ್ಟಿದ್ದರೆ, ಸರ್ಕಾರವೇ ಬೀಳುತ್ತಿರಲಿಲ್ಲ. ಆದರೆ ಏಕಪಕ್ಷೀಯವಾದ ನಿರ್ಧಾರ ಮಾಡದೇ ಈಗ ಬೇರೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಅವರ ತಪ್ಪು ನಿರ್ಧಾರಗಳೇ ಸರ್ಕಾರ ಉರುಳುವುದಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಸಿಎಲ್ಪಿ ನಾಯಕ ಹೇಳಿದ್ದಾರೆ.
ಇನ್ನು ದೇವೇಗೌಡರು ತಮ್ಮ ಕುಟುಂಬ ಬಿಟ್ಟು ಬೇರ ಯಾರನ್ನೂ ರಾಜಕೀಯವಾಗಿ ಬೆಳೆಸೋದಿಲ್ಲ. ನಾಗೇಗೌಡ, ಜೀವರಾಜ್ ಆಳ್ವಾ, ಬಿ.ಎನ್ ಬಚ್ಚೇಗೌಡ, ಹೀಗೆ ಸಾಲು ಸಾಲು ಹೆಸರುಗಳಿವೆ. ಇವರ್ಯಾರನ್ನು ಅವರು ಬೆಳೆಸಿದರಾ? ಅವರೆಲ್ಲರನ್ನು ಯಾಕೆ ಬೆಳೆಸಲಿಲ್ಲ ಎಂದು ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರ ಆರೋಪ ಮಾಡಿದ್ದರು. ಸರ್ಕಾರ ರಚನೆ ಆದ ದಿನದಿಂದಲೂ ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸಲು ಬಿಟ್ಟಿರಲಿಲ್ಲ ಎಂದು ದೂರಿದ್ದರು.