ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಕೊರೊನಾದಿಂದ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿದೆ. ಜನ ಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ. ಈಗ ರಾಜ್ಯದ ಜನರ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ದರ ಏರಿಕೆ ಮಾಡಬಾರದೆಂದು ಅಭಿಪ್ರಾಯಪಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೊರೊನಾ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರ, ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಈ ಸಮಯದಲ್ಲಿ ಸರ್ಕಾರ ದರ ಏರಿಕೆ ಮಾಡಿರುವುದು ತಪ್ಪು. ಈ ದರ ಏರಿಕೆಯನ್ನ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆ ನೋಡಿದರೆ ಈ ವರ್ಷ ದರಗಳನ್ನು ಕಡಿಮೆ ಮಾಡಬೇಕಾದ ಅಗತ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುಚ್ಛಕ್ತಿ ದರ ಕಡಿಮೆ ಮಾಡಿದರೆ ಮಾರುಕಟ್ಟೆಯಲ್ಲಿ ಆರ್ಥಿಕ ಚೈತನ್ಯ ಬರುತ್ತದೆ. ಆದರೆ ರಾಜ್ಯ ಸರ್ಕಾರ ವಿವೇಚನಾ ರಹಿತವಾಗಿ ವಿದ್ಯುತ್ ದರ ಏರಿಸಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಅಳವಡಿಸಿಕೊಂಡ ವಿದ್ಯುತ್ ನೀತಿಗಳಿಂದಾಗಿ ಕರ್ನಾಟಕ ರಾಜ್ಯವು ವಿದುಚ್ಛಕ್ತಿ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದೆ. ಅದಕ್ಕೂ ಮೊದಲು ಅನ್ಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಬಳಿ ವಿದ್ಯುತ್ಗಾಗಿ ಮೊರೆ ಇಡಬೇಕಾದ ಪರಿಸ್ಥಿತಿ ಇತ್ತು ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ ಬೇಡಿಕೆ ಇರುವಷ್ಟು ವಿದ್ಯುತ್ ಬಳಸಿಕೊಂಡು ಹೆಚ್ಚುವರಿ ವಿದ್ಯುತ್ ಬೇರೆ ರಾಜ್ಯಗಳಿಗೆ ಮಾರಬಹುದಾದಷ್ಟು ಉತ್ಪಾದನೆ ಮಾಡುತ್ತಿದ್ದೇವೆ. ಕಳೆದ ಏಳೆಂಟು ತಿಂಗಳಿಂದೀಚೆಗೆ ರಾಯಚೂರಿನ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕಗಳನ್ನು (ಆರ್.ಟಿ.ಪಿ.ಎಸ್) ರಾಜ್ಯ ಸರ್ಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ದುರಂತವೆಂದರೆ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಪ್ರತಿ ಯೂನಿಟ್‍ಗೆ 50 ಪೈಸೆ ಹೆಚ್ಚಿಗೆ ನೀಡಿ ವಿದ್ಯುತ್ ಖರೀದಿ ಮಾಡುತ್ತಿದೆ. ರಾಜ್ಯದಲ್ಲೂ ಕೂಡ ಪ್ರಮುಖ ಖಾಸಗಿ ವ್ಯಕ್ತಿಗಳು ವಿದ್ಯುತ್ ಉತ್ಪಾದಿಸುವ ಪ್ರಮಾಣ ಹೆಚ್ಚಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಜನರ ಸುಮಾರು 5-6 ಸಾವಿರ ಕೋಟಿ ಮೊತ್ತವನ್ನು ಬೇಕಾಬಿಟ್ಟಿಯಾಗಿ ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ರಾಜ್ಯ ಸರ್ಕಾರವು ಬೆಸ್ಕಾಂಗೆ 3,361 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ರಾಜ್ಯದಲ್ಲಿನ ಉಳಿದ ಎಸ್ಕಾಂಗಳ ಕಥೆಯೂ ಇದೇ ರೀತಿ ಇದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಅನವಶ್ಯಕವಾಗಿ ನೀಡುತ್ತಿರುವ ಹಣವನ್ನು ತಪ್ಪಿಸಿದರೆ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 5ರಿಂದ 6 ಸಾವಿರ ಕೋಟಿ ರೂ. ಉಳಿಸಿ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದಾಗಿದೆ. ಅಗತ್ಯವಿದ್ದರೆ ರಾಯಚೂರಿನ ಆರ್ಟಿಪಿಎಸ್ ಸ್ಥಾವರಕ್ಕೆ ಚಾಲನೆ ನೀಡುವುದರ ಮೂಲಕ ನಾವೇ ವಿದ್ಯುತ್ ಉತ್ಪಾದಿಸಿ ಅಗತ್ಯವಿರುವ ರಾಜ್ಯಗಳಿಗೆ ಸರಬರಾಜು ಮಾಡಬಹುದು. ಅಲ್ಲದೆ ಆ ಭಾಗದ ಯುವಕರಿಗೆ ಉದ್ಯೋಗ ನೀಡಬಹುದು. ಈ ಕುರಿತಂತೆ ಅಗತ್ಯವಿದ್ದರೆ ವಿದ್ಯುತ್ ದರ ಹೇಗೆ ಕಡಿಮೆ ಮಾಡಬಹುದು ಹಾಗೂ ಸಂಸ್ಥೆಗಳನ್ನು ಹೇಗೆ ಲಾಭದಾಯಕವಾಗಿ ನಡೆಸಬಹುದೆಂದು ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ.