ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿನಿಂದ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಳೆದು ತೂಗಿ ಸಂಪುಟದ ಮೊದಲ ಪಟ್ಟಿ ಪ್ರಕಟಿಸಿರುವ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಹಾಗೂ ಸಂಪುಟ ದರ್ಜೆ ಸಚಿವರಾಗಿ ಡಾ. ಜಿ. ಪರಮೇಶ್ವರ್, ಕೆ. ಹೆಚ್. ಮುನಿಯಪ್ಪ, ಕೆ. ಜೆ. ಜಾರ್ಜ್, ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ , ಜಮೀರ್ ಅಹ್ಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣ ಮದುವಣ ಗಿತ್ತಿಯಂತೆ ಶೃಂಗಾರಗೊಂಡಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಜೊತೆಗೆ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಇಡೀ ಸ್ಟೇಡಿಯಂ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿರುವ ಜನರು ಹರ್ಷೋದ್ಗಾರ ವ್ಯಕ್ತಪಡಿಸಿದರು. ಎಲ್ಲೆಲ್ಲೂ ಕಾಂಗ್ರೆಸ್ ಬಾವುಟ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭಾವಚಿತ್ರವಿರುವ ಪ್ಲೆಕ್ಸ್ಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಪದಗ್ರಹಣಕ್ಕೆ ಕ್ಷಣಗಣನೆ - ಗಣ್ಯಾತಿ ಗಣ್ಯರ ಆಗಮನ: ಸಿಇಟಿ ಪರೀಕ್ಷೆಯೂ ಸುಗಮ
ಕಂಠೀರವ ಕ್ರೀಡಾಂಗಣ ಸುತ್ತಲೂ ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರ ಪ್ಲೆಕ್ಸ್ಗಳು ರಾರಾಜಿಸುತ್ತಿವೆ. ಕ್ರೀಡಾಂಗಣದ ಹೊರಗೆ ಡೊಳ್ಳು ಕುಣಿತ, ತಮಟೆ ಸೇರಿದಂತೆ ವಿವಿಧ ವಾದ್ಯಗೋಷ್ಠಿ, ನೃತ್ಯ ವೈಭವವನ್ನು ಜನರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2013 ರಲ್ಲೂ ಸಹ ಸಿದ್ದರಾಮಯ್ಯ ಅವರು ಇದೇ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ. ಕೆ. ಶಿವಕುಮಾರ್ ಸೇರಿದಂತೆ ಎಂಟು ಮಂದಿ ಸಚಿವರು ವಿಧಾನಸೌಧಕ್ಕೆ ಆಗಮಿಸಿ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿರುವ ಸಿಎಂ ಕೊಠಡಿ ಸಂಖ್ಯೆ 323 ನ್ನು ಹೂಗಳಿಂದ ಅಲಂಕರಿಸಲಾಗಿದೆ. ಸಚಿವ ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸುವ ಸಿಎಂ ಹಾಗೂ ಡಿಸಿಎಂ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ತಿಳಿಸಲಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಯೂ ಮಾಡಿರದಷ್ಟು ಸ್ಥಾನಗಳನ್ನು ಗೆದ್ದು ಗದ್ದುಗೆ ಏರಿದೆ. ಚುನಾವಣೆಗೆ ಮೊದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಎನ್ನುವ ಪ್ರಶ್ನೆ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ದರೂ, 135 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಸಿಎಂ ಯಾರು ಎನ್ನುವ ಪ್ರಶ್ನೆ ಕಾವು ಹೆಚ್ಚಾಗಿತ್ತು. ಕೆಲವು ದಿನಗಳ ಮಾತುಕತೆ, ಹೈಕಮಾಂಡ್ ಚರ್ಚೆ, ಹಗ್ಗಜಗ್ಗಾಟದ ನಂತರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಆಯ್ಕೆಯಾಗಿ, ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಮಾಣ ವಚನ ಕಾರ್ಯಕ್ರಮ.. ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು, ಲಘು ಲಾಠಿ ಚಾರ್ಜ್, ಇನ್ಸ್ಪೆಕ್ಟರ್ ಸೇರಿ ಮೂವರಿಗೆ ಗಾಯ