ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಬಡವರ ಪರವಿರುವ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ, ನೀವು ನುಡಿದಂತೆ ನಡೆಯುತ್ತೀರಿ ಎಂದು ನಂಬಿದ್ದೇನೆ. ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ಅಕ್ಕಿಯಲ್ಲಿ ಕಡಿತ ಮಾಡುವ ಹಾಗೂ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕಡಿತಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ ಎಂದು ಇಂದು ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದ ಸಿದ್ದರಾಮಯ್ಯನವರು, ಹೋರಾಟದ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ನವದೆಹಲಿಯಲ್ಲಿ ಇರುವ ಸಿಎಂ ಕೂಡಲೇ ಪತ್ರಿಕಾ ಪ್ರಕಟಣೆ ಮೂಲಕ, ಈ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಬಡವರ ಪರ ಇರುವ ಯಾವುದೇ ಕಾರ್ಯಕ್ರಮ ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಸುದ್ದಿ ಮಾಧ್ಯಮದ ಪ್ರತಿನಿಧಿಗಳಿಗೂ ಹೇಳಿಕೆ ನೀಡಿದ್ದರು. ಸಿಎಂ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.