ಬೆಂಗಳೂರು: ತಮ್ಮ ಕಾರಿಗೆ ಮೊಟ್ಟೆ ಎಸೆದ ವ್ಯಕ್ತಿ ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದರೂ ಜೈಲಿಗೆ ಕಳುಹಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಕೊಡಗು ಮೊಟ್ಟೆ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂಬ ವಿಚಾರ ಗಮನಕ್ಕೆ ಬಂತು. ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ಅಂದು ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು? ಕಾಂಗ್ರೆಸ್‌ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದ್ದೀರಾ? 'ಆಪರೇಷನ್ ಕಮಲ' ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ 'ಆಪರೇಷನ್ ಕಮಲ' ಕೂಡಾ ರಾಜ್ಯ ಬಿಜೆಪಿ ನಡೆಸುತ್ತದೆ ಎಂಬುದು ಮಡಿಕೇರಿಯಲ್ಲಿ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳುಹಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ? ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸಹ ಟ್ವೀಟ್ ಮಾಡಿ ತನ್ನ ಆಕ್ರೋಶ ಹೊರ ಹಾಕಿದ್ದು, ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕಥೆ ಕಟ್ಟಿರುವ ರಾಜ್ಯ ಬಿಜೆಪಿ ಉತ್ತರಿಸಬೇಕು. ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್‌ಗೇಕೆ ಆಪ್ತನಾಗಿದ್ದಾನೆ ಎಂದು ಪ್ರಶ್ನೆ ಮಾಡಿದೆ.
ಗುರುವಾರ ಕೊಡಗು ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾದ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದರು. ಅಲ್ಲದೆ, ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಉದ್ಧಟತನ ಮೆರೆದಿದ್ದರು. ಈ ಘಟನೆ ತೀವ್ರ ಚರ್ಚೆ ಗ್ರಾಸವಾಗಿದೆ. ರಾಜಕೀಯ ನಾಯಕರ ಮಧ್ಯೆ ಆರೋಪ- ಪ್ರತ್ಯಾರೋಪಗಳು ಮುಂದುವರಿದಿವೆ.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಜಾತಿವಾದಿ ಮುಖ್ಯಮಂತ್ರಿ: ಸಿದ್ದರಾಮಯ್ಯ ಗುಡುಗು