ಮೈಸೂರು : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿಯಲ್ಲಿ ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದ್ದಾರೆ.
ನಮ್ಮ ಸರ್ಕಾರದ ಕರ್ನಾಟಕ ಮಾದರಿ ಆಡಳಿತ ಇಂದು ಪಕ್ಷಾತೀತವಾಗಿ ದೇಶದ ಜನ ಗುರುತಿಸುತ್ತಿದ್ದಾರೆ. ಪ್ರಣಾಳಿಕೆ ರಚನೆಯಲ್ಲಿ ನನಗೆ ಅವಕಾಶ ನೀಡಿರುವುದು ಕರ್ನಾಟಕದ ಮಾದರಿ ಆಡಳಿತಕ್ಕೆ ಎಐಸಿಸಿ ನೀಡಿರುವ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ. ಪಕ್ಷದ ಪ್ರಣಾಳಿಕೆ ಎನ್ನುವುದು ಕೇವಲ ಮತದಾರರಿಗೆ ನೀಡುವ ಭರವಸೆಗಳ ಪಟ್ಟಿ ಅಲ್ಲ. ಜನತೆಗೆ ನಾವು ನೀಡುವ ವಚನವಾಗಿದ್ದು, ಅದನ್ನು ಅನುಷ್ಠಾನಕ್ಕೆ ತರುವುದು ನಿಜವಾದ ರಾಜಧರ್ಮ ಎಂದು ನಾನು ತಿಳಿದುಕೊಂಡವನು ಎಂದಿದ್ದಾರೆ.
ಹಿಂದಿನ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು - ಸಮಬಾಳು ನೀಡುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಆಡಳಿತವನ್ನು ನೀಡಿ ಜನತೆಯ ವಿಶ್ವಾಸಾರ್ಹತೆ ಗಳಿಸಿದ್ದೆವು. ಅದೇ ಹಾದಿಯಲ್ಲಿ ಈಗಿನ ಸರ್ಕಾರ ಕೂಡ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಕೂಡಾ ಕರ್ನಾಟಕ ಮಾದರಿ ಆಡಳಿತದ ಅನುಕೂಲ ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.
ನನ್ನ ಎಲ್ಲ ಯೋಚನೆ, ಯೋಜನೆಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವ ಪಕ್ಷದ ಹಿರಿಯರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ : ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಉದ್ಯಮಿಗಳಿಗೆ ಸಿಎಂ ಸಿದ್ದರಾಮಯ್ಯ ಮನವಿ