ಬೆಂಗಳೂರು: ವಿಧಾನಸಭೆ ಒಳಗೆ ಮತ್ತು ಹೊರಗೆ ಪ್ರತಿಪಕ್ಷದ ನಾಯಕರಾಗಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದ ಜಗದೀಶ್ ಶೆಟ್ಟರ್ ಅವರನ್ನು ಸ್ವಾರ್ಥಕ್ಕೋಸ್ಕರ ಬಲಿ ಕೊಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಸೇರುತ್ತಿರುವುದು ಸ್ವಾಗತಾರ್ಹ. ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದೇವೆ. ಕರ್ನಾಟಕ ಕಂಡ ಒಬ್ಬ ಸಜ್ಜನ ರಾಜಕಾರಣಿ. ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿದ್ದರೂ ಕೂಡ ಯಾವತ್ತೂ ಜಾತ್ಯತೀತವಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾನು ಅವರನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರು ಸಿಎಂ ಆಗಿದ್ದಾಗ ನಾನು ಪ್ರತಿಪಕ್ಷ ನಾಯಕನಾಗಿದ್ದೆ, ನಾನು ಸಿಎಂ ಆದಾಗ ಅವರು ಪ್ರತಿಪಕ್ಷ ನಾಯಕರಾಗಿದ್ದರು. ಯಾವತ್ತು ಸಹ ಅವರು ವೈಯಕ್ತಿಕ ಕೆಲಸಕ್ಕಾಗಿ ಭೇಟಿಯನ್ನು ಮಾಡಲಿಲ್ಲ ಮತ್ತು ದೂರವಾಣಿ ಕರೆಯನ್ನೂ ಮಾಡಲಿಲ್ಲ" ಎಂದರು.
ಮುಂದುವರೆದು ಮಾತನಾಡಿ, "ವಿಧಾನಸಭೆ ಒಳಗೆ ಹಾಗೂ ಹೊರಗೆ ಪ್ರತಿಪಕ್ಷದ ನಾಯಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಅತ್ಯಂತ ನಿಷ್ಠಾವಂತ ರಾಜಕಾರಣಿ ಶೆಟ್ಟರ್. ಸ್ವಾರ್ಥಕ್ಕೋಸ್ಕರ ಅವರನ್ನು ಬಲಿಕೊಡುವ ಕಾರ್ಯ ಆಗಿದೆ. ನಮ್ಮ ಸರ್ಕಾರದ ವಿರುದ್ಧವೂ ಅವರು ಸಾಕಷ್ಟು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ರಾಜಕೀಯ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ವಿರುದ್ಧವಾಗಿ ನಿಷ್ಟೂರವಾಗಿ ಕಾರ್ಯನಿರ್ವಹಿಸುವ ಅಗತ್ಯ ಇರುತ್ತದೆ ಅದನ್ನ ಅವರು ಮಾಡಿದ್ದರು. ಇವರು ಕೇವಲ ಉತ್ತರ ಕರ್ನಾಟಕ ಭಾಗದ ನಾಯಕರು ಮಾತ್ರವಲ್ಲ ಇಡೀ ರಾಜ್ಯದ ನಾಯಕರು".
"ಕರ್ನಾಟಕದಲ್ಲಿ ಲಿಂಗಾಯತ ಸಮಾಜ ಬಹುದೊಡ್ಡ ಸಮಾಜ. ಯಡಿಯೂರಪ್ಪ ಅವರ ನಂತರ ಆ ಸಮುದಾಯದ ಪ್ರಮುಖ ನಾಯಕರಾಗಿ ಗೋಚರಿಸಿದ್ದು ಶೆಟ್ಟರ್. ಈ ಇಬ್ಬರು ನಾಯಕರನ್ನ ಆ ಪಕ್ಷ ಅವಮಾನಿಸಿದೆ. ಮುಖ್ಯಮಂತ್ರಿಗಳಾಗಿ ರಾಜೀನಾಮೆ ನೀಡುವ ದಿನ ಬಿಎಸ್ವೈ ಕಣ್ಣೀರು ಹಾಕಿದ್ದನ್ನು ನೆನಪಿಸಿಕೊಳ್ಳಬಹುದು. ಲಿಂಗಾಯತ ಸಮುದಾಯದ ಜನ ಸಹ ಇದನ್ನು ಸಹಿಸಿಕೊಂಡಿಲ್ಲ. ಬಿ ಎಸ್ ಯಡಿಯೂರಪ್ಪರನ್ನು ಬಿಜೆಪಿ ನಡೆಸಿಕೊಂಡಿರುವ ರೀತಿ ಎಷ್ಟು ಕೆಟ್ಟದಾಗಿತ್ತೆಂದರೆ ಅಂತಹ ಸ್ಥಿತಿಯನ್ನು ಯಾವ ಪಕ್ಷದವರು ಯಾವ ನಾಯಕರಿಗೂ ಮಾಡಬಾರದು. ಇದು ದುರುದ್ದೇಶದಿಂದ ಕೂಡಿತ್ತು ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ".
"ಜಗದೀಶ್ ಶೆಟ್ಟರ್ ಸಹ ಕೆಲವೇ ಕೆಲವು ಕರ್ನಾಟಕದ ಸ್ವಾಭಿಮಾನಿ ರಾಜಕಾರಣಿಗಳಲ್ಲಿ ಒಬ್ಬರು. ತಮ್ಮತನಕ್ಕೆ ಧಕ್ಕೆ ಆಗುವ ರೀತಿ ಯಾವತ್ತೂ ಕಾರ್ಯನಿರ್ವಹಿಸಿಲ್ಲ. ಶೆಟ್ಟರ್ ಅನ್ನು ಪಕ್ಷ ನಡೆಸಿಕೊಂಡಿರುವ ರೀತಿ ಅವರ ಅನುಯಾಯಿಗಳಿಗೆ ಹಾಗೂ ಬೆಂಬಲಿಗರಿಗೆ ಬೇಸರತರಿಸಿದೆ. ಬಿಜೆಪಿಯಲ್ಲಿ ಇಷ್ಟು ದೊಡ್ಡ ನಾಯಕರಿಗೆ ಇಷ್ಟರ ಮಟ್ಟಿನ ಅನ್ಯಾಯವಾಗುತ್ತದೆ ಎಂದು ನಾವು ಸಹ ನಿರೀಕ್ಷಿಸಲಿಲ್ಲ. ಏಕಏಕಿ ಮುನ್ಸೂಚನೆ ಇಲ್ಲದೆ ಟಿಕೆಟ್ ತಪ್ಪಿಸುವುದು ಘೋರ ಅಪರಾಧ. ಯಾವುದೇ ಕಾರಣಕ್ಕೂ ಅವರ ಸ್ವಾಭಿಮಾನಕ್ಕೆ ಧಕ್ಕೆ ಆಗದ ರೀತಿ ನಾವು ನಡೆದುಕೊಳ್ಳುತ್ತೇವೆ ಎಂದರು. ಶೆಟ್ಟರ್ ಮೂಲಕ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಇನ್ನೂ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ. 150ಕ್ಕೂ ಹೆಚ್ಚು ಸ್ಥಾನವನ್ನು ನಾವು ಗಳಿಸುತ್ತೇವೆ ಎಂಬ ನಂಬಿಕೆ ಇದೆ" ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್.. 150 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಖರ್ಗೆ