ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಹೊಸ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಮತ್ತು ಎಂಟು ಜನ ಸಚಿವರು ಸಹ ಪದಗ್ರಹಣ ಮಾಡಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭದಲ್ಲಿ ಸಿದ್ದರಾಮಯ್ಯ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಡಿ ಕೆ ಶಿವಕುಮಾರ್ ಶ್ರೀಗಂಗಾಧರ ಅಜ್ಜನ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಡಾ. ಜಿ. ಪರಮೇಶ್ವರ್ ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸತೀಶ್ ಜಾರಕಿಹೊಳಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಜೊತೆಗೆ ಹೆಚ್ಕೆ ಮುನಿಯಪ್ಪ, ಕೆಜೆ ಜಾರ್ಜ್, ಎಂಪಿ ಪಾಟೀಲ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಮಕ್ಕಳ್ ನೀದಿ ಮೈಯಂ ಮುಖ್ಯಸ್ಥ, ನಟ ಕಮಲ್ ಹಾಸನ್, ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಸೇರಿದಂತೆ ಹಲವು ಗಣ್ಯರು ಮತ್ತು ನಾಯಕರು ಉಪಸ್ಥಿತರಿದ್ದರು.
ಅಲ್ಲದೇ, ಕ್ರೀಡಾಂಗಣ ಕ್ರೀಡಾಂಗಣದಲ್ಲಿ ಅಪಾರ ಜನಸ್ತೋಮವೇ ಸೇರಿತ್ತು. ರಾಜ್ಯದ ನಾನಾ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬೆಂಬಲಿಗರ ದಂಡೇ ಹರಿದು ಬಂದಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವಾಗ ನೆರೆದಿದ್ದ ಜನತೆಯ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದೇ ವೇಳೆ ಪ್ರಮಾಣ ವಚನ ಸಮಾರಂಭದ ವೇದಿಕೆಯನ್ನು ಮುಂಬರುವ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೂ ವೇದಿಕೆ ಆಗಿತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ಆಡಳಿತದ ಇತರ ಮೂರು ರಾಜ್ಯಗಳ ಸಿಎಂಗಳೊಂದಿಗೆ ತಮಿಳುನಾಡು, ಬಿಹಾರ ಸಿಎಂ, ಜೆಡಿಯು, ಆರ್ಡಿಜೆ, ಎನ್ಪಿಸಿ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಪಕ್ಷಗಳು ನಾಯಕರು ತಮ್ಮ ಒಗ್ಗಟ್ಟಿನ ಪ್ರದರ್ಶನ ಮಾಡಿದರು.
-
#WATCH | Bengaluru: Nameplate of Siddaramaiah put up outside the CM's office in Vidhan Soudha after he took oath as the CM of Karnataka. pic.twitter.com/oPGzXXY1He
— ANI (@ANI) May 20, 2023 " class="align-text-top noRightClick twitterSection" data="
">#WATCH | Bengaluru: Nameplate of Siddaramaiah put up outside the CM's office in Vidhan Soudha after he took oath as the CM of Karnataka. pic.twitter.com/oPGzXXY1He
— ANI (@ANI) May 20, 2023#WATCH | Bengaluru: Nameplate of Siddaramaiah put up outside the CM's office in Vidhan Soudha after he took oath as the CM of Karnataka. pic.twitter.com/oPGzXXY1He
— ANI (@ANI) May 20, 2023
ವಿಧಾನಸೌಧದಲ್ಲಿ ನೂತನ ಸಿಎಂ ನಾಮಫಲಕ: ಹೊಸ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ವಿಧಾನಸೌಧದಲ್ಲಿ ಸಿಎಂ ನಾಮಫಲಕ ಬದಲಾಯಿಸಲಾಯಿತು. ವಿಧಾನಸೌಧದ ಸಿಎಂ ಕಚೇರಿಯ ಹೊರಗೆ ಸಿದ್ದರಾಮಯ್ಯನವರ ಹೆಸರಿನ ನಾಮಫಲಕವನ್ನು ಸಿಬ್ಬಂದಿ ಅಳವಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಬಾಲ್ಯ ಜೀವನವೇ ಒಂದು ರೋಚಕ!: ನಾಟಿ ಕೋಳಿ ಸಾರಿನ ಪ್ರೀತಿ!