ಬೆಂಗಳೂರು: ಉತ್ತರ ಪ್ರದೇಶ ಸರ್ಕಾರದ ನಡೆ ಉದ್ಧಟತನದ ಪರಮಾವಧಿ. ಇದನ್ನ ತೀವ್ರವಾಗಿ ಖಂಡಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಮಿಶ್ರಾ ಅವರ ಮಗ ರೈತರು ಪ್ರತಿಭಟನೆ ನಡೆಯುತ್ತಿರುವ ಜಾಗಕ್ಕೆ ಕಾರು ನುಗ್ಗಿಸಿದ್ದಾರೆ. ರೈತರು ಇದನ್ನ ವಿರೋಧ ಮಾಡಿದ್ದಾರೆ. ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಕೆಲವರು ಗಾಯಗೊಂಡಿದ್ದರೆ, ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ. ಕೇಂದ್ರ ಸಚಿವರ ಮಗ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಸಚಿವರ ಮಗನನ್ನು ಕೂಡಲೇ ಬಂಧಿಸಬೇಕು. ಅಲ್ಲದೆ, ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಗೂಂಡಾ ಯುಪಿ ಸರ್ಕಾರ: ಪ್ರಿಯಾಂಕಾ ಗಾಂಧಿ ರೈತರಿಗೆ ಸಾಂತ್ವನ ಹೇಳಲು ಹೋಗ್ತಾರೆ. ಆದ್ರೆ ಅವರನ್ನ ಪೊಲೀಸರು ಕಾನೂನುಬಾಹಿರವಾಗಿ ಬಂಧಿಸಿದ್ದಾರೆ. ಪ್ರತಿಪಕ್ಷದವರನ್ನು ಸಂವಿಧಾನ ಬಾಹಿರವಾಗಿ ತಡೆದಿದ್ದಾರೆ. ಯಾವುದೇ ಸರ್ಕಾರ ಪ್ರಜಾಪ್ರಭುತ್ವದಂತೆ ಕೆಲಸ ಮಾಡಬೇಕು. ಸರ್ವಾಧಿಕಾರಿ ಧೋರಣೆ ಮಾಡುವುದಲ್ಲ. ಇಂದು ಸಂಜೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯಪಾಲರ ಭೇಟಿಗೆ ಮುಂದಾಗಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡ್ತೇವೆ. ಯುಪಿ ಸರ್ಕಾರವನ್ನ ಗೂಂಡಾ ಸರ್ಕಾರ ಅನ್ನಬೇಕು. ಪ್ರಿಯಾಂಕಾ ಗಾಂಧಿಯವರು ಸ್ಪಾಟ್ ಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಶಾಸಕರ ಕ್ಲಬ್ ನಿರ್ಮಾಣಕ್ಕೆ ನನ್ನ ಸಹಮತ ಇದೆ: ಬಾಲಬ್ರೂಯಿ ಗೆಸ್ಟ್‌ಹೌಸ್ ತೆರವುಗೊಳಿಸಿ, ಶಾಸಕರ ಕ್ಲಬ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶಾಸಕರಿಗೆ ಕ್ಲಬ್ ಏಕೆ ನಿರ್ಮಿಸಬಾರದು?. ಬಾಲಬ್ರೂಯಿ ಐತಿಹಾಸಿಕ ಕಟ್ಟಡ ಅಂದರೆ ಏನರ್ಥ?. ನಿಮಗಾದ್ರೆ ಪ್ರೆಸ್‌ಕ್ಲಬ್ ಹೈಕೋರ್ಟ್ ಪಕ್ಕದಲ್ಲೇ ಬೇಕು, ನಮಗಾದರೆ ಬೇರೆ ಕಡೆ ಮಾಡಬೇಕಾ?. ಕಾನ್ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣವಾಗಬೇಕು ಎಂದರು.
ಕಾರ್ಪೊರೇಷನ್ ಅವಾಂತರ: ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಪ್ರತಿಕ್ರಿಯಸಿದ ಸಿದ್ದರಾಮಯ್ಯ, ಪ್ರತಿ ಬಾರಿ ಮಳೆ ಬಂದಾಗ ಈ ತರಹ ಆಗುತ್ತದೆ. ಹಿಂದೆ ನಾನು ಸಿಎಂ ಆಗಿದ್ದಾಗ ಅಧಿಕಾರಿಗಳಿಗೆ ಸಲಹೆ ಕೊಟ್ಟಿದ್ದೆ. ರಾಜಕಾಲುವೆ ತೆರವಿಗೆ ಸೂಚಿಸಿದ್ದೆ. ಸರಾಗವಾಗಿ ನೀರು ಹರಿಯಲು ಅವಕಾಶ ನೀಡಬೇಕು. ಈ ಸರ್ಕಾರ ಬಂದಾಗ ಸಮಸ್ಯೆ ಪರಿಹರಿಸಲಿಲ್ಲ. ಇದು ಕಾರ್ಪೊರೇಷನ್ನವರ ಅವಾಂತರ ಎಂದು ವಾಗ್ದಾಳಿ ನಡೆಸಿದರು.