ಬೆಂಗಳೂರು: ರಾಜ್ಯಪಾಲರು ಆಲ್ ಮಾರ್ಟಿ ಮೀಟಿಂಗ್ ಕರೆದಿದ್ದರು. ರಾಜ್ಯಪಾಲರು ಈ ಮೀಟಿಂಗ್ ಕರೆದಿರೋದು ಸಂವಿಧಾನ ಬಾಹಿರ ಅಂತ ಹೇಳಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರು ಕರೆದಿದ್ದ ವಿಡಿಯೋ ಸಂವಾದದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ಬಳಿಕ ಆಚೆ ಬಂದು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಅವರು ಮುಖ್ಯಮಂತ್ರಿಯನ್ನು ಕರೆಯಬಹುದು, ಮಾಹಿತಿ ಪಡೆದುಕೊಳ್ಳಬಹುದು ಅಷ್ಟೇ. ಅವರಿಗೆ ಗೌರವ ಕೊಡೋದಕ್ಕೋಸ್ಕರ ನಾನು ಅಟೆಂಡ್ ಆಗಿದ್ದೆ. ರಾಜ್ಯಪಾಲರು ಸಭೆ ಕರೆದಿದ್ದರಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಅಂತ ಆಯ್ತು. ಸರ್ಕಾರ ಇಲ್ಲದಿದ್ದಾಗ ಮಾತ್ರ ರಾಜ್ಯಪಾಲರು ಪ್ರವೇಶ ಮಾಡ್ತಾರೆ. ಈಗ ಚುನಾಯಿತ ಸರ್ಕಾರ ಇಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಆಗ್ರಹ ಮಾಡುತ್ತೇನೆ. ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ತಾಂತ್ರಿಕ ಸಲಹಾ ಸಮಿತಿಯ ಎರಡನೇ ಅಲೆ ಬಗ್ಗೆ ಮುನ್ಸೂಚನೆ ನೀಡಿತ್ತು. ನವೆಂಬರ್ನಲ್ಲೇ ಮುನ್ಸೂಚನೆ ಕೊಟ್ಟಿತ್ತು. ಜನ ಬೆಡ್ ಇಲ್ಲ, ಐಸಿಯು ಬೆಡ್, ಆ್ಯಂಬುಲೆನ್ಸ್ ಇಲ್ಲ ಎಂದು ಪರದಾಡುತ್ತಿದ್ದಾರೆ. ಸರ್ಕಾರ ಯಾವುದೇ ಸಿದ್ಧತೆಯನ್ನೇ ಮಾಡಿಕೊಳ್ಳಲಿಲ್ಲ. ಶಿಕ್ಷಣ ಸಚಿವರ ಆಪ್ತ ಸಹಾಯಕನಿಗೇ ಆಕ್ಸಿಜನ್ ಸಿಗದೇ ಸತ್ತು ಹೋದ್ರು. ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದ ಹಾಗೇ ಫುಲ್ ಫ್ರೀ ಬಿಟ್ಟುಬಿಡ್ತು ಸರ್ಕಾರ. ಜಾತ್ರೆ, ಕುಂಭಮೇಳ ಮಾಡೋಕೆ ಬಿಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೇಜವಾಬ್ದಾರಿತನ ತೋರಿವೆ. ಪಿಎಂಗೆ ಚುನಾವಣೆ ನಡೆಸುವ ಬಗ್ಗೆ ಆಸಕ್ತಿ ಇದೆಯೇ ಹೊರತು ಜನರ ಸಮಸ್ಯೆ ಆಲಿಸೋದ್ರಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.