ಬೆಂಗಳೂರು: ಬಿಜೆಪಿ ಆರ್ಎಸ್ಎಸ್ನ ರಾಜಕೀಯ ಅಂಗ. ಇದನ್ನು ನಿಯಂತ್ರಿಸುವುದು ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿಂದು ಆಯೋಜಿಸಿದ್ದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಕಲ್ಪ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗೋಲ್ವಾಲ್ಕರ್ ಅವರ ಚಿಂತನ ಗಂಗಾ ಪುಸ್ತಕದಲ್ಲಿ, ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಚಿಂತನ ಗಂಗಾ ಕೃತಿಯಲ್ಲಿ ಒಂದು ಕಡೆ “ಅಲ್ಲಿ ಇಲ್ಲಿ ಹೀಗೆ ಹಲವು ದೇಶಗಳ ಸಂವಿಧಾನದಿಂದ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಬಂದು, ಹೊಂದಾಣಿಕೆ ಇಲ್ಲದಂತೆ ಅಸಂಬದ್ಧವಾದ ರೀತಿ ಸಂವಿಧಾನ ರಚನೆ ಮಾಡಿದ್ದಾರೆ. ಇದು ಈ ದೇಶಕ್ಕೆ ಹೊಂದಾಣಿಕೆ ಇಲ್ಲದ ಸಂವಿಧಾನ” ಎಂದು ಬರೆದಿದ್ದಾರೆ. ಇದು ಆರ್ಎಸ್ಎಸ್ಗೆ ಸಂವಿಧಾನದ ಬಗ್ಗೆ ಕವಡೆಕಾಸಿನ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ಬಿಜೆಪಿಯವರು ಸಂವಿಧಾನ ಹೇಳುವ ಸಮಾನತೆಗೆ ವಿರುದ್ಧವಾದವರು. ಸಮಸಮಾಜ ಸ್ಥಾಪನೆ, ಎಲ್ಲರಿಗೂ ಶಿಕ್ಷಣ ನೀಡುವುದು, ಸಂಪತ್ತಿನಲ್ಲಿ ಪಾಲುದಾರರನ್ನಾಗಿ ಮಾಡುವುದು ಅವರಿಗೆ ಇಷ್ಟವಿಲ್ಲ. ಕಾರಣ ಸಮಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ. ಸಮಾಜದಲ್ಲಿ ಮೇಲು ಕೀಳು ಎಂಬ ತಾರತಮ್ಯ ಇದ್ದಾಗ ಮಾತ್ರ ಶೋಷಣೆಗೆ ಅವಕಾಶ ಇರುತ್ತದೆ. ಅವರಿಗೆ ತಾವು ಮೇಲ್ವರ್ಗದ ಜನ ಎಂಬ ಅಭಿಪ್ರಾಯ ಸಮಾಜದಲ್ಲಿ ಯಾವಾಗಲು ಇರಬೇಕು ಎಂದು ಬಯಸುವವರು ಎಂದು ಟೀಕಿಸಿದರು.
ಸಂಪತ್ತು, ಅಧಿಕಾರ ತಮ್ಮ ಕೈಯಲ್ಲೇ ಇರಬೇಕು ಎಂಬ ಕಾರಣಕ್ಕೆ ಚತುರ್ವರ್ಣ ವ್ಯವಸ್ಥೆಯನ್ನು ಸ್ಥಾಪಿಸಿ, ಮನುಸ್ಮೃತಿಯನ್ನು ಒಪ್ಪಿಕೊಂಡರು. ಇದಕ್ಕೆ ವಿರುದ್ಧವಾಗಿ ಸಮಾನತೆ, ಸ್ವಾತಂತ್ರ್ಯ, ಸ್ವಾಭಿಮಾನಿ ಬದುಕಿನ ಅವಕಾಶ ನೀಡುವ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದರು. ಸಂವಿಧಾನವು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಈ ಹಾದಿಯಲ್ಲಿ ಮೀಸಲಾತಿಯೂ ಒಂದು ಭಾಗ. ಹೀಗಾಗಿ ಅವರು ಸಂವಿಧಾನ ವಿರೋಧ ಮಾಡುತ್ತಾರೆ ಎಂದು ವಿವರಿಸಿದರು.
ಪದೇ ಪದೇ ಇನ್ನೆಷ್ಟು ವರ್ಷ ಮೀಸಲಾತಿ ಇರಬೇಕು ಎಂದು ಪ್ರಶ್ನಿಸುತ್ತಿದ್ದವರು ಬಿಜೆಪಿಯವರು. ಈಗ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ ಮೇಲೆ ಬಾಯಿ ಮುಚ್ಚಿಕೊಂಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಬಹುದು ಎಂಬುದು ಸಂವಿಧಾನದಲ್ಲಿ ಇಲ್ಲ. ಕೇಂದ್ರ ಸರ್ಕಾರ ತರಾತುರಿಯಲ್ಲಿ ಒಂದಿನ ಲೋಕಸಭೆಯಲ್ಲಿ, ಒಂದಿನ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಮಾಡಿಕೊಂಡು, ಕೇವಲ 48 ಗಂಟೆಯಲ್ಲಿ ಯಾವುದೇ ಸಮೀಕ್ಷೆಯ ವರದಿ ಇಲ್ಲದೆ, ಹೋರಾಟಗಳಿಲ್ಲದೆ ಮೀಸಲಾತಿ ನೀಡಿಬಿಟ್ಟರು ಎಂದರು.
ಈಗ ಮೀಸಲಾತಿ ಇಲ್ಲದವರು ಯಾರಾದರೂ ಉಳಿದಿದ್ದಾರಾ? ಹೀಗಾದರೆ ಸಾಮಾಜಿಕವಾಗಿ ಸಮಾನತೆ ಹೇಗೆ ಸಾಧ್ಯ? ಶೋಷಿತ ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತಾ? ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ಭಾವಿಸಿಕೊಂಡು ಕೆಲವು ಜನ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಸನ್ಮಾನ ಮಾಡಿ ಹೊಗಳಿದ್ದಾರೆ ಎಂದು ಹೇಳಿದರು.
ಕೆಲವರು ಏನು ಮಾಡುತ್ತಾರಪ್ಪ ಎಂದರೆ ಹಿಂದುಳಿದ ಜಾತಿಗಳ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಬಿಜೆಪಿ, ಜೆಡಿಎಸ್ ನಿಂದ ನಿಂತುಕೊಳ್ತೇವೆ ಎಂದು ಹೋಗುತ್ತಾರೆ. ಹೀಗಾದರೆ ನಿಮ್ಮನ್ನು ಹಗುರಾಗಿ ತೆಗೆದುಕೊಳ್ಳದೆ ಇನ್ನೇನು ಮಾಡುತ್ತಾರೆ. ಬಿಜೆಪಿಯವರು ಬಿ ಫಾರಂ ಹಿಡಿದುಕೊಂಡು ನಿಂತಿರುತ್ತಾರೆ. ಹಾಗಂತ ನಿಮ್ಮಲ್ಲಿ ಬದ್ಧತೆ ಇರಬೇಕಲ್ವಾ? ಶೋಷಿತ ಸಮುದಾಯದ ಮುಖಂಡರು ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಲು ಹೋಗಬಾರದು. ಜನರಿಗೆ ಇವೆಲ್ಲಾ ಗೊತ್ತಿರುವುದಿಲ್ಲ, ನಾವು ಅವರ ಹಾದಿ ತಪ್ಪಿಸಬಾರದು ಎಂದು ಸಲಹೆ ಇತ್ತರು.
ಹಿಂದುಳಿದ ಜಾತಿಯವರು ಅಥವಾ ದಲಿತರು ಬಿಜೆಪಿಯಿಂದ ಗೆದ್ದರೆ ಅವರು ಹೇಳಿದಂತೆ ಮಾಡಬೇಕಲ್ವಾ? ಅವರು ಗರ್ಭಗುಡಿಯಲ್ಲಿ ನಿಂತು ತೀರ್ಮಾನ ಮಾಡಿ ಬಂದು ಹೇಳುತ್ತಾರೆ, ಅದನ್ನು ಇವರು ಜಾರಿ ಮಾಡಬೇಕು. ಕರಾವಳಿ ಭಾಗದಲ್ಲಿ ಗಲಾಟೆ, ಕೊಲೆಗಳು ಆಗಬೇಕಾದರೆ ಶೂದ್ರರ ಹುಡುಗರನ್ನು ಕರೆದುಕೊಂಡು ಬಂದು ಮುಂದೆ ಬಿಡುತ್ತಾರೆ. ಆರ್ಎಸ್ಎಸ್ ಒಬ್ಬನಾದ್ರೂ ಜೈಲಿಗೆ ಹೋಗಿದ್ದರೆ, ಕೊಲೆ ಆಗಿದ್ದರೆ ತೋರಿಸಿ ನೋಡೋಣ. ಜೈಲಿನಿಂದ ಬಂದವರಿಗೆ ಹೂವಿನ ಹಾರ ಹಾಕುವವರು ಇವರು. ಅವರನ್ನು ಜೈಲಿಗೆ ಕಳಿಸಿದ್ದು ಕೂಡ ಇವರೇ. ಈ ರೀತಿ ಜನರ ದಾರಿ ತಪ್ಪಿಸಿ ಗೊಂದಲ ನಿರ್ಮಾಣ ಮಾಡಿಸುತ್ತಾರೆ. ಇದನ್ನೆಲ್ಲ ಅರ್ಥಮಾಡಿಕೊಳ್ಳದೆ ಹೋದರೆ ಅಂಬೇಡ್ಕರ್ ಅವರು ನೀಡಿದ್ದ ಎಚ್ಚರಿಕೆಯ ಮಾತು ಸತ್ಯವಾಗುತ್ತದೆ ಎಂದು ಹೇಳಿದರು.
ಮೀಸಲಾತಿ ಊರ್ಜಿತವಲ್ಲ ಪರಿಶಿಷ್ಟ ಜಾತಿಯವರ ಮೀಸಲಾತಿ ಪ್ರಮಾಣವನ್ನು 15 ರಿಂದ 17% ಗೆ ಏರಿಕೆ ಮಾಡಿ, ಈ 17% ಅನ್ನು ಆಧಾರವಾಗಿಟ್ಟುಕೊಂಡು ವಿವಿಧ ಜಾತಿಗಳಿಗೆ 6%, 4.5%, 1% ಹೀಗೆ ಲೆಕ್ಕಹಾಕಿದ್ದಾರೆ. ಆದರೆ ಈ ಮೀಸಲಾತಿ ಹೆಚ್ಚಳ ಇನ್ನು ಊರ್ಜಿತವೇ ಆಗಿಲ್ಲ. ಲಂಬಾಣಿಗಳಿಗೆ, ಬೋವಿಗಳಿಗೆ 4.5% ಮೀಸಲಾತಿ ಲೆಕ್ಕ ಹಾಕಿದ್ದಾರೆ ಇದಕ್ಕೂ ಮೊದಲು ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕು. ಈ ಬಿಜೆಪಿಯವರು ಜನರ ಹಣೆಗೆ ತುಪ್ಪ ಹಚ್ಚಿದ್ದಾರೆ, ಮೂಗಿಗೆ ಹಚ್ಚಿದ್ದರೆ ವಾಸನೆಯಾದರೂ ಬರುತ್ತಿತ್ತು, ಈಗ ವಾಸನೆಯೂ ಬರುತ್ತಿಲ್ಲ ಎಂದು ಲೇವಡಿ ಮಾಡಿದರು.
ಚಂದ್ರಪ್ಪ ಭೇಟಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ಮಾಜಿ ಸಂಸದ ಚಂದ್ರಪ್ಪ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿ ಶುಭ ಹಾರೈಸಿದರು. ಈ ವೇಳೆ ಮಾಜಿ ಸಚಿವೆ ಮೋಟಮ್ಮ ಉಪಸ್ಥಿತರಿದ್ದರು.
ಪ್ರಧಾನಿ ಮೋದಿಗೆ ಸಿದ್ದು ಟಾಂಗ್ : ಬಂಡಿಪುರ ಅರಣ್ಯದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸಫಾರಿ ಮಾಡಿದ್ದು, 22 ಕಿ.ಮಿ. ಸಂಚರಿಸಿದರೂ ಒಂದೂ ಹುಲಿ ಕಾಣದಿರುವುದಕ್ಕೆ ಲೇವಡಿ ಮಾಡಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ. ಅಯ್ಯೋ ಪಾಪ, ಇನ್ನು ಕೆಲವೇ ದಿನಗಳಲ್ಲಿ ಸೇವ್ ಬಂಡಿಪುರ (ಬಂಡಿಪುರ ಉಳಿಸಿ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿ ಜೀ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಮುನ್ನ ಸಿಎಂ ಅಭ್ಯರ್ಥಿ ಘೋಷಿಸುವ ವಾಡಿಕೆ ಇಲ್ಲ: ಶಶಿ ತರೂರ್