ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಜನಾಶೀರ್ವಾದ ಯಾತ್ರೆಗೆ ಸಜ್ಜಾಗುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಇದರ ತಾಲೀಮು ಆರಂಭಿಸಿದರು.
ಸಿದ್ದರಾಮಯ್ಯನವರ ಯಾತ್ರೆಯನ್ನು ಸಾಧ್ಯವಾದಷ್ಟು ಸುಗಮ, ಸರಳ ಹಾಗೂ ನಿರಾಳವಾಗಿಸುವ ನಿಟ್ಟಿನಲ್ಲಿ ಸಾಕಷ್ಟು ತಯಾರಿಯನ್ನು ಅವರ ಆಪ್ತರು ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಒಂದು ಹೈಟೆಕ್ ಬಸ್ ಸಹ ಸಿದ್ಧವಾಗಿದೆ. ಯಾತ್ರೆ ಆರಂಭಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದು, ನಿನ್ನೆ ಯಾತ್ರೆಯಲ್ಲಿ ಸಿದ್ದರಾಮಯ್ಯ ಬಳಸುವ ಹೈಟೆಕ್ ಬಸ್ನ ಶಕ್ತಿ, ಸಾಮರ್ಥ್ಯದ ಪರೀಕ್ಷೆ ನಡೆದಿದೆ.
ಪ್ರತಿಷ್ಠಿತ ಕಂಪನಿ ಸಿದ್ಧಪಡಿಸಿರುವ ಎಲೆಕ್ಷನ್ ಬಸ್ನಲ್ಲಿ ಚಾಲಕನ ಹೊರತುಪಡಿಸಿ 6 ಸುಖಾಸೀನ ಆಸನಗಳಿವೆ. ಶೌಚಾಲಯ ವ್ಯವಸ್ಥೆ ಇದೆ. ಮೈಸೂರು ರಸ್ತೆಯ ಖಾಸಗಿ ಆಟೊಮೊಬೈಲ್ ಸಂಸ್ಥೆ ಒಳಭಾಗದ ವಿನ್ಯಾಸ ಬದಲಿಸಿ ಹೈಟೆಕ್ ಮಾಡಿಕೊಟ್ಟಿದೆ. ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮೇಲುಸ್ತುವಾರಿಯಲ್ಲಿ ಸಜ್ಜುಗೊಂಡಿದೆ.
ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ವಿಶೇಷ ಲೈಟಿಂಗ್ ಗಮನ ಸೆಳೆಯುತ್ತದೆ. ಕಿಟಕಿಗಳನ್ನು ಗಾಜಿನ ದೊಡ್ಡ ಹಲಗೆಗಳಿಂದ ಮಾಡಲಾಗಿದ್ದು, ಕುಳಿತು ಜನರನ್ನು ಆರಾಮವಾಗಿ ವೀಕ್ಷಿಸುವ ಅವಕಾಶ ಇದೆ. ಬಸ್ಸಿನೊಳಗೆ ನಿಂತು ಭಾಷಣ ಮಾಡಲು ಲಿಫ್ಟ್ ಪೋಡಿಯಂ ವ್ಯವಸ್ಥೆ ಇದೆ.
ಪ್ರಚಾರದ ವೇಳೆ ಆಯಾಸವಾದರೆ ವಿಶ್ರಾಂತಿ ತೆಗೆದುಕೊಳ್ಳಲು ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಚಾರ ಸಮಯದಲ್ಲಿ ಟಿವಿ ವೀಕ್ಷಣೆಗೆ 3 ಎಲ್‍ಇಡಿ ಅಳವಡಿಕೆ ಮಾಡಲಾಗಿದೆ. ಹ್ಯಾಂಡ್ ವಾಶ್ಗೆ ಸಿಂಕ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ. ವೈಫೈ ಕನೆಕ್ಷನ್ ವ್ಯವಸ್ಥೆ ಇದೆ. ನೀರು, ತಿಂಡಿ ಇಡಲು ಚಿಕ್ಕ ಫ್ರಿಜ್ ಇದರಲ್ಲಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯೊಂದಿಗೆ ಗೆಲ್ಲುವ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ, ಕೋಲಾರ ಜಿಲ್ಲೆಗೆ ನಿನ್ನೆ ಭೇಟಿ ಕೊಟ್ಟಿದ್ದಾರೆ. ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇವರು ಕ್ಷೇತ್ರವನ್ನು ಸಿದ್ದರಾಮಯ್ಯಅವರಿಗೆ ಬಿಟ್ಟುಕೊಡಲು ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ: 'ಜನಾಶೀರ್ವಾದ ಯಾತ್ರೆ, ರಾಮನಗರ ಸಮಾರಂಭಕ್ಕೆ ಇಲ್ಲದ 3ನೇ ಅಲೆ ನಮ್ಮ ಹೋರಾಟದ ವೇಳೆಗೆ ಬಂತಾ?'