ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ಹಾಕಿರುವ ಅವರು, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿಗಳಿಂದಾಗಿ ನಾಡಿನ ಜನ ಯಾಕಾದರೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೆವು ಎಂದು ಪರಿತಪಿಸುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಚರ್ಚೆ ರಾಜ್ಯದ ಉದ್ದಗಲಕ್ಕೂ ಆರಂಭವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಮತ್ತೊಮ್ಮೆ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ. ಮುಖ್ಯಮಂತ್ರಿಗಳು ತಾವು ಪ್ರಾಮಾಣಿಕರಾಗಿದ್ದರೆ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ಏಕೆ ನಿರಾಕರಿಸುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಕೊರೊನಾದಿಂದ ಜನ ಸಾಯುತ್ತಿದ್ದಾರೆ, ಇತ್ತ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಬಡ ವಿದ್ಯಾರ್ಥಿಗಳಿಗೆ ವಿತರಿಸುವ ಲ್ಯಾಪ್‌ಟಾಪ್, ವೈದ್ಯಕೀಯ ಉಪಕರಣಗಳ ಖರೀದಿ ಸೇರಿ ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ಬರೀ ಭ್ರಷ್ಟಾಚಾರ. ಹೆಣಗಳ ಮೇಲೆ ದುಡ್ಡು ಮಾಡುವ ಇಂತಹ ಸರ್ಕಾರವನ್ನು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲು ನೋಡುತ್ತಿರುವುದು. ರಾಜ್ಯ ಬಿಜೆಪಿ ಸರ್ಕಾರ ಸಾಲದ ಮೇಲೆ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದೆ. ಕೇಂದ್ರದಿಂದ ಬರಬೇಕಾದ ಯಾವ ಅನುದಾನವನ್ನೂ ಕೇಳುವ ಧೈರ್ಯ ಬಿಜೆಪಿ ಸಚಿವರಿಗಾಗಲೀ, ಶಾಸಕರಿಗಾಗಲೀ ಅಥವಾ ಸಂಸದರಿಗಾಗಲೀ ಇಲ್ಲ. ನಾಡಿನ ಜನರ ಪರ ಧ್ವನಿ ಎತ್ತಲಾಗದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಕಿಡಿಕಾರಿದ್ದಾರೆ.