ಬೆಂಗಳೂರು: ರಾಜ್ಯ ಸರ್ಕಾರ ಎನ್ಇಇಟಿ - ಜೆಇಇ ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಪರೀಕ್ಷೆ ನಡೆಸಲು ಸರ್ಕಾರ ಅತಿರೇಕದ ನಿಲುವು ತಾಳಿದೆ. ಇದಕ್ಕೆ ಸಾಕಷ್ಟು ಮಂದಿಯಿಂದ ವಿರೋಧ ವ್ಯಕ್ತವಾದರೂ ಸಹ ಬಿಜೆಪಿ ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಕೋವಿಡ್ 19 ಕೇಸ್ ಗಳು ದೇಶದಲ್ಲಿ ತೀವ್ರವಾಗಿ ಏರಿಕೆಯಾಗುತ್ತಿವೆ. ಹೀಗಿದ್ದರೂ ವಿದ್ಯಾರ್ಥಿಗಳು ರಿಸ್ಕ್ ತೆಗೆದುಕೊಳ್ಳಲು ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
![ಸಿದ್ದರಾಮಯ್ಯ ಟ್ವೀಟ್](https://etvbharatimages.akamaized.net/etvbharat/prod-images/01:23:36:1598514816_kn-bng-04-siddu-tweet-script-7208077_27082020132146_2708f_1598514706_1075.jpg)
ಪರೀಕ್ಷೆಗೋಸ್ಕರ ವಿದ್ಯಾರ್ಥಿಗಳು ಜೀವ ಪಣಕ್ಕಿಡಬೇಕಾ?, ವಿದ್ಯಾರ್ಥಿಗಳಿಗೆ ಪ್ರಯಾಣ ಸುರಕ್ಷಿತವಲ್ಲ, ವಸತಿ ವ್ಯವಸ್ಥೆ ಕೂಡ ಕಷ್ಟಕರ. ಸಾರ್ವಜನಿಕ ಸಾರಿಗೆ ಇನ್ನೂ ಸಂಪೂರ್ಣವಾಗಿ ಪ್ರಾರಂಭಗೊಂಡಿಲ್ಲ. ಪ್ರಧಾನಿ ಮೋದಿ ಇನ್ನಷ್ಟು ಸ್ಪಂದಿಸಿ, ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಒತ್ತಾಯಿಸಿದ್ದಾರೆ.