ಬೆಂಗಳೂರು : ಕುರಿಗಳು ಸತ್ತರೆ ಪರಿಹಾರ ನೀಡುವ ಅನುಗ್ರಹ ಯೋಜನೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾಮಂಡಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾಮಂಡಳ ಸದಸ್ಯರು ನ್ಯಾಯದ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ನನ್ನ ಬೆಂಬಲವಿದೆ. ಹಿಂದೆ ನಮ್ಮ ಸರ್ಕಾರ ಇದ್ದಾಗ ನೀಡಿದ್ದ ಅನೇಕ ಸವಲತ್ತುಗಳನ್ನು ರಾಜ್ಯ ಸರ್ಕಾರ ಕಿತ್ತುಕೊಂಡಿದೆ.
ಕುರುಬ ಸಮುದಾಯದವರು ಎದುರಿಸುತ್ತಿದ್ದ ಸಮಸ್ಯೆಯನ್ನು ಮನಗಂಡು ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಮುಂದಾಗಬಹುದಾದ ಸಮಸ್ಯೆಯ ಅರಿವು ಇಲ್ಲದೆ ಸರ್ಕಾರ ಸೌಲಭ್ಯಗಳನ್ನು ಕಿತ್ತುಕೊಂಡಿದೆ ಎಂದು ಗುಡುಗಿದರು.
ರಾಜ್ಯ ಸರ್ಕಾರ ನಿರಂತರವಾಗಿ ಜನವಿರೋಧಿ ಆಡಳಿತ ನೀಡುತ್ತಿದೆ. ಜನಸ್ನೇಹಿ ಯೋಜನೆಗಳನ್ನು ವಾಪಸ್ ಪಡೆಯುತ್ತಿದೆ. ಯಾವುದೇ ವಿಚಾರಕ್ಕೂ ಪ್ರತಿಪಕ್ಷ ನಾಯಕರನ್ನು ಪರಿಗಣಿಸುತ್ತಿಲ್ಲ ಹಾಗೂ ಮಾತುಕತೆಗೆ ಕರೆಯುತ್ತಿಲ್ಲ. ಏಕಾಏಕಿ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸಾಕಷ್ಟು ಖಂಡನೆ ವ್ಯಕ್ತಪಡಿಸುತ್ತಿದ್ದೇವೆ. ಇದಕ್ಕೆ ಸರ್ಕಾರದಿಂದ ಯಾವುದೇ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಪಶುಸಂಗೋಪನೆ ಸಚಿವರಾಗಿದ್ದಾಗ ಹಲವು ಸಮಸ್ಯೆ ಹೇಳುತ್ತಿದ್ದರು. ಕಾಡಿನಲ್ಲಿ ಕುರಿ ಮೇಯಲು ಬಿಡಬೇಕು ಅಂತಾ ಇಲಾಖೆಗೆ ಸೂಚನೆ ನೀಡಿದ್ದೆ. ರೋಗ ಬಂದ ಕುರಿಗಳಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕುರಿ ಸತ್ತರೆ ಪರಿಹಾರ ಸಹ ಘೋಷಣೆ ಮಾಡಿದ್ದೆ.
ಕುರಿ, ಎಮ್ಮೆ, ಹಸು ಸತ್ತರೆ ಪರಿಹಾರ ಕೊಟ್ಟಿದ್ದೆ. ಅಷ್ಟೇ ಅಲ್ಲ, ಅನುಗ್ರಹ ಅಂತಾ ಹೆಸರಿಟ್ಟು ಕಾರ್ಯಕ್ರಮ ಜಾರಿ ಮಾಡಿದ್ದೆ. ಆದರೆ, ಯಡಿಯೂರಪ್ಪ ಬಂದ ಮೇಲೆ ಅದನ್ನು ನಿಲ್ಲಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಅನುಗ್ರಹ ಅಂದ್ರೆ ಏನು ಅನ್ನೋದೇ ಗೊತ್ತಿಲ್ಲ ಎಂದರು ಆರೋಪಿಸಿದರು.
ಈಗ ಕುರಿಗಳನ್ನ ಕುರುಬರು, ಗೊಲ್ಲರು, ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರು ಸಹ ಸಾಕುತ್ತಿದ್ದಾರೆ. ನಮ್ಮ ಮಾಜಿ ಸ್ಪೀಕರ್ ರಮೇಶ್ ಕುಮಾರ್ 500 ಕುರಿ ಸಾಕುತ್ತಿದ್ದಾನೆ. ಹೀಗೆ ಎಲ್ಲಾ ಜಾತಿಯವರು ಈಗ ಸಾಕುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ರೂಪಾಯಿ ಪರಿಹಾರ ಕೊಡೋಣ ಎಂದಾಗ ಪ್ರತಿಭಟನಾಕಾರರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೂಗಿದರು.
ಬಜೆಟ್ ಅಧಿವೇಶನದಲ್ಲಿ ಕುರಿಗಳಿಗೆ ಪರಿಹಾರ ಜಾಸ್ತಿ ಮಾಡಿ ಅಂತಾ ಒತ್ತಾಯ ಮಾಡುತ್ತೇನೆ. ಬೇಕಿದ್ರೆ ಪ್ರತಿಭಟನೆ ಸಹ ಮಾಡೋಣ ಎಂದರು. ಮೈಸೂರು ಮೇಯರ್ ಚುನಾವಣೆ ಬಗ್ಗೆ ಇದೇ ವೇಳೆ ಮಾತನಾಡಿ, ಮೈಸೂರು ಮೇಯರ್ ಚುನಾವಣೆ ಬಗ್ಗೆ ನಾನು ಮಾತಾಡಲ್ಲ. ಪಕ್ಷದ ಅಧ್ಯಕ್ಷರಿಗೆ ನಾನು ವಹಿಸಿದ್ದೇನೆ. ಅವರೇ ಈ ಬಗ್ಗೆ ಮಾತನಾಡುತ್ತಾರೆ ಎಂದರು.