ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದ ಪರ ಮಲತಾಯಿ ಧೋರಣೆ ತೋರುತ್ತಿದ್ದು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಧಾನಸಭೆಯಲ್ಲಿ ಅತಿವೃಷ್ಟಿ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ 24,941 ಕೋಟಿ ರೂ. ನಷ್ಟವಾಗಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಬಾರಿ ಹಿಂದಿಗಿಂತ ದೊಡ್ಡ ರೀತಿಯ ಪ್ರವಾಹ ಬಂದಿದೆ. ಪ್ರವಾಹದಿಂದ ಮನೆ ಕಳೆದುಕೊಂಡ ಇನ್ನೂ ಹಲವು ಮಂದಿಗೆ ಪರಿಹಾರ ಸಿಕ್ಕಿಲ್ಲ. 2020ರಲ್ಲಿ ಮೂರು ಬಾರಿ ರಾಜ್ಯದಲ್ಲಿ ಪ್ರವಾಹ ಬಂದಿದೆ. ಕಳೆದ ವರ್ಷ 19 ಜಿಲ್ಲೆಗಳ 123 ತಾಲೂಕಿನಲ್ಲಿ ಪ್ರವಾಹ ಆಗಿದೆ. ಈ ಬಾರಿ 25 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಇದರಿಂದ 21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮನೆಗಳಿಗೆ ಹಾನಿ ಉಂಟಾಗಿದೆ. ಪ್ರವಾಹ ಮುಗಿದರೂ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ ನಿಂತಿಲ್ಲ.
69,30,000 ರೈತ ಕುಟುಂಬಗಳು ರಾಜ್ಯದಲ್ಲಿದ್ದು, ಈ ಪೈಕಿ ಸಣ್ಣ ರೈತರು, ಅತೀ ಸಣ್ಣ ರೈತರು ಶೇ. 78ರಷ್ಟಿದ್ದಾರೆ. ಕೋವಿಡ್ನಿಂದಾಗಿ ಸಾಕಷ್ಟು ಜನರು ಹಳ್ಳಿಗೆ ಹೋಗಿದ್ದಾರೆ. ಹಳ್ಳಿಗಳಲ್ಲಿ ಕೃಷಿ ಮಾಡಿದ ಕಾರಣ ಶೇ. 15ರಷ್ಟು ಬಿತ್ತನೆ ಹೆಚ್ಚಾಗಿದೆ. ಈ ವರ್ಷ ಸಂಭವಿಸಿದ ಪ್ರವಾಹದಿಂದ ಒಟ್ಟು ಬಿತ್ತನೆಯಲ್ಲಿ ಶೇ. 25ರಷ್ಟು ನಷ್ಟ ಉಂಟಾಗಿದೆ. 55 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ನಿರಂತರ ಮಳೆಯಿಂದ ಕೊಳೆ ರೋಗ ಕೂಡ ಎದುರಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಕೋವಿಡ್ ರೋಗಿಗಳ ಗೌಪ್ಯತೆ ಕಾಪಾಡಿಕೊಳ್ಳದವರ ವಿರುದ್ಧ ಶಿಸ್ತು ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ
ಅತಿವೃಷ್ಟಿಯಿಂದ 15 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾದರೂ ರೈತರಿಗೆ ಕೇವಲ 110 ಕೋಟಿ ರೂ. ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ ಆದ ಹಾನಿಗೆ ಕೇಂದ್ರದಿಂದ 10 ಸಾವಿರ ಕೋಟಿ ರೂ. ಪರಿಹಾರ ಕೇಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಆದರೆ 5 ಸಾವಿರ ಕೋಟಿ ರೂ. ಪರಿಹಾರ ತರಲಾಗಲಿಲ್ಲ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಬರೀ 577 ಕೋಟಿ ರೂಪಾಯಿ ಎಂದರು.
ಕೇಂದ್ರದಿಂದ ಪರಿಹಾರ ತರಲು ನಿಮಗೆ ಶಕ್ತಿಯಿಲ್ಲ. ಹೋಗಲಿ ಈ ವರ್ಷ 82 ಸಾವಿರ ಕೋಟಿ ರೂ. ಸಾಲ ಮಾಡಿದ್ದೀರಲ್ಲ ಅದರಿಂದಲಾದರೂ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ನೀವು ಎಂಭತ್ತೆರಡು ಸಾವಿರ ಕೋಟಿ ಮಾತ್ರವಲ್ಲ, ಇನ್ನೂ ಹೆಚ್ಚು ಸಾಲ ಮಾಡುವ ಪರಿಸ್ಥಿತಿಗೆ ತಲುಪುತ್ತೀರಿ. ಯಾಕೆಂದರೆ ಸರ್ಕಾರದ ಬೊಕ್ಕಸ ಈಗಾಗಲೇ ಬರಿದಾಗಿದೆ ಎಂದರು.
ಬೆಂಗಳೂರಿನಲ್ಲಿ ಮಳೆ ಬಂದು ಮನೆಗಳು ಹಾನಿಗೀಡಾದರೆ ಇಪ್ಪತ್ತೈದು ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳುತ್ತೀರಿ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಿದ್ದರೆ ಹತ್ತು ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳುತ್ತೀರಿ. ಯಾಕೆ ಈ ಭೇದಭಾವ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿರುವವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು. ಕರ್ನಾಟಕದಿಂದ ಇಪ್ಪತ್ತೈದು ಮಂದಿ ಬಿಜೆಪಿಯಿಂದ ಸಂಸದರಾಗಿದ್ದಾರೆ. ಇವರನ್ನೆಲ್ಲ ಕರೆದುಕೊಂಡು ಮುಖ್ಯಮಂತ್ರಿಗಳು ಪ್ರಧಾನಿ ಎದುರು ನಿಂತು ಪರಿಹಾರ ತರಲು ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.