ಬೆಂಗಳೂರು: ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಪ್ರಶಸ್ತಿ ಪ್ರದಾನ ಮಾಡದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಎರಡು ವರ್ಷಗಳಿಂದ ಪ್ರತಿಷ್ಠಿತ 'ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡದೆ ನಾಡಿನ ಹೆಮ್ಮೆಯ ನಾಯಕನಿಗೆ ಅಗೌರವ ತೋರಿದ ರಾಜ್ಯ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಅರಸು ಅವರಿಗೆ ಅಗೌರವ ತೋರಿದ ಸಿಎಂಗೆ ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಡಿ.ದೇವರಾಜ ಅರಸು ಅವರ ಮೇಲೆ ನಿಮಗೆ ಒಂದಿಷ್ಟು ಗೌರವ ಇದ್ದರೆ ಮೊದಲು ಅವರು ಜಾರಿಗೆ ತಂದಿದ್ದ 'ಉಳುವವನೇ ಭೂ ಒಡೆಯ' ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಉಳ್ಳವನಿಗೆ ಭೂಮಿ ನೀಡಲು ಹೊರಟಿರುವ ನಿಮ್ಮ ತೀರ್ಮಾನವನ್ನು ಹಿಂದಕ್ಕೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
ದೇವರಾಜ್ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದ್ದು, ಈಗ ಯಾರು ಬೇಕಾದರೂ ಕೃಷಿ ಭೂಮಿ ಕೊಳ್ಳುವ ಅವಕಾಶ ಒದಗಿ ಬಂದಿದೆ. ಇದರಿಂದ ರೈತರಿಗೆ ಇನ್ನಷ್ಟು ಸಮಸ್ಯೆ ಆಗಲಿದೆ. ರೈತರ ಭೂಮಿ ಉಳ್ಳವರ ಪಾಲಾಗಲಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ. ಇದೀಗ ಅರಸು ಜನ್ಮದಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಇದೇ ವಿಚಾರ ಪ್ರಸ್ತಾಪಿಸಿದ್ದಾರೆ.