ಬೆಂಗಳೂರು: 2020ನೇ ಸಾಲಿನ ಬಿಬಿಎಂಪಿ ವಿಧೇಯಕ ಪರಿಶೀಲಿಸಿ ವರದಿ ನೀಡಲು ರಚನೆಯಾಗಿರುವ ವಿಧಾನಸಭೆಯ ಜಂಟಿ ಪರಿಶೀಲನಾ ಸಮಿತಿ ಸಭೆ ನಾಳೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ನಾಳಿನ ಸಭೆಯಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕರ ಸಭೆಯಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರೀಸ್, ಅಖಂಡ ಶ್ರೀನಿವಾಸ್ ಮೂರ್ತಿ, ಎಂಎಲ್ ಸಿ ಗೋವಿಂದರಾಜು, ಪಿ.ಆರ್.ರಮೇಶ್, ನಾರಾಯಣಸ್ವಾಮಿ, ನಸೀರ್ ಅಹ್ಮದ್, ಐವಾನ್ ಡಿಸೋಜಾ ಸೇರಿ ಹಲವರು ಭಾಗಿಯಾಗಿದ್ದರು.
ವಿಧಾನಸಭೆಯ ಜಂಟಿ ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾದ ವಿಚಾರಗಳು ಹಾಗೂ ಪಕ್ಷದ ನಿಲುವು ವ್ಯಕ್ತಪಡಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಇಂದು ಸಿದ್ದರಾಮಯ್ಯ ಬೆಂಗಳೂರು ನಗರ ಶಾಸಕರ ಜೊತೆ ಚರ್ಚಿಸಿದರು.
ಭಿನ್ನಮತ ಚರ್ಚೆ: ಇದೇ ವೇಳೆ ಡಿ.ಜೆ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಯಿತು. ಪಕ್ಷದಲ್ಲೇ ಆಂತರಿಕ ಭಿನ್ನಮತದ ವಾಸನೆ ಇದೆ. ಪಕ್ಷದಲ್ಲೇ ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಆರೋಪ ಮಾಡಿರುವ ಹಿನ್ನೆಲೆ ಬೆಂಗಳೂರು ನಗರ ಶಾಸಕರನ್ನು ಕರೆಸಿ ಸಿದ್ದರಾಮಯ್ಯ ಚರ್ಚಿಸಿದರು.
ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇಂಥದ್ದೊಂದು ಸಮಸ್ಯೆ ಸೃಷ್ಟಿಯಾಗುವುದು ಸರಿಯಲ್ಲ. ಈ ತರಹದ ಬೆಳವಣಿಗೆ ನಡೆದಿರುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಇಂತಹ ಸಾಧ್ಯತೆ ಇದ್ದರೂ ಅದನ್ನು ಬೆಳೆಯಲು ಬಿಡಬೇಡಿ. ಪಕ್ಷದ ಪ್ರಗತಿಯ ದೃಷ್ಟಿಯಿಂದ ಇದು ಮಾರಕವಾಗಲಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಾಂಗಿಕ ಹೋರಾಟದ ಮೂಲಕ ಮತ್ತೆ ಕಾಂಗ್ರೆಸ್ಸನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ಮಾತ್ರ ನಮ್ಮ ಗುರಿಯಾಗಬೇಕು. ಈ ಗೆಲುವಿನಲ್ಲಿ ಹಾಲಿ ಶಾಸಕರನ್ನು ಉಳಿಸಿಕೊಳ್ಳುವ ಜೊತೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ನಾವು ಯಶಸ್ಸು ಕಾಣಬೇಕು ಎಂದು ಶಾಸಕರಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು.