ಬೆಂಗಳೂರು: ಬ್ಲ್ಯಾಕ್‌ಮೇಲ್ ಮಾಡಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆದಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಪರ ಪ್ರಚಾರ ಸಭೆ ವೇಳೆ ಮಾತನಾಡಿದ ಅವರು, ಉಪಚುನಾವಣೆ ಸಿದ್ದರಾಮಯ್ಯ ಸರ್ಕಾರಕ್ಕೆ ಕೈಗೆ ಸಿಗದ ದ್ರಾಕ್ಷಿ ಹುಳಿ. ಅವರಿಗೆ ಹಗಲುಗನಸು ಬೇಡ. ಕಾಂಗ್ರೆಸ್ನಲ್ಲಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲ್ಲ ಎಂದರು.
ಜಗ್ಗೇಶ್ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಗ್ಗೇಶ್ ಬರುತ್ತಾರೆ ಎಂಬ ವಿಶ್ವಾಸ ಇದೆ. ನಾನು ಹೊರಗಿನಿಂದ ಬಂದವಳು. ಅವರು ಸಹ ಕಳೆದ ಬಾರಿ ಜನರ ಪ್ರೀತಿ ಪಡೆದವರು. ಈ ಬಾರಿ ಮತ್ತೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಮಹದಾಯಿ ಯೋಜನೆ ವಿಚಾರದಲ್ಲಿ ನಾವು ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಗೋವಾ ಸರ್ಕಾರದ ಬಳಿ ನಾವು ಮನವಿ ಮಾಡುತ್ತೇವೆ. ರಾಜ್ಯಕ್ಕೆ ಈಗಾಗಲೇ ಹಂಚಿಕೆಯಾಗಿರುವ ಏಳೂವರೆ ಟಿಎಂಸಿ ನೀರಿಗಿಂತ ಹೆಚ್ಚಿಗೆ ನೀರನ್ನು ಪಡೆಯಲು ಪ್ರಯತ್ನಿಸುತ್ತೇವೆ. ಇದು ಕುಡಿಯುವ ನೀರಿಗಾಗಿನ ಹೋರಾಟ ಎಂಬ ಬಗ್ಗೆ ಸಿಎಂ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ತನ್ವೀರ್ ಸೇಠ್ ಮೇಲೆ ದಾಳಿ ವಿಚಾರವಾಗಿ ಪ್ರತಿಕ್ರಿಯಸಿದ ಅವರು, ಈ ಹಲ್ಲೆ ಖಂಡನೀಯ. ಪಿಎಫ್‌ಐ ಸಂಘಟನೆ ವಿರುದ್ಧ ಈಗಾಗಲೇ ನಾನು ಪತ್ರ ಬರೆದಿದ್ದೇನೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ರದ್ದತಿಗೆ ನಾನು ಕೇಂದ್ರಕ್ಕೆ ಮತ್ತೆ ಮನವಿ ಮಾಡುವೆ. ರುದ್ರೇಶ್ ಕೊಲೆ ಪ್ರಕರಣದ ಸಂದರ್ಭದಲ್ಲೂ ಇಂತಹ ಸಂಘಟನೆಗಳ ಬಗ್ಗೆ ನಾನು ಖಂಡಿಸಿದ್ದೆ ಎಂದರು.