ಬೆಂಗಳೂರು: ದೇಶದ ಪ್ರಗತಿ, ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತದೆ. ಸದ್ಯ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತೆರಿಗೆ ನೀತಿಯಿಂದ ದೇಶದ ಮಧ್ಯಮ ಮತ್ತು ದುಡಿಯುವ ವರ್ಗಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5 ನೇ ಸ್ಥಾನದಲ್ಲಿತ್ತು. ಆದರೆ 2020ರ ಜಿ.ಡಿ.ಪಿ. ಬೆಳವಣಿಗೆಯನ್ನು ಆಧರಿಸಿ ಕೌಶಿಕ್ ಬಸು ಮುಂತಾದ ಅರ್ಥಶಾಸ್ತ್ರಜ್ಞರು ವಿಶ್ವದ 193 ದೇಶಗಳಲ್ಲಿ ಭಾರತ 164 ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಂದಾಜು ಮಾಡಿದ್ದಾರೆ.
ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾ ದೇಶದ ತಲಾವಾರು ಜಿ.ಡಿ.ಪಿ. ಶೇ. 4ರಷ್ಟು ಬೆಳವಣಿಗೆ ಹೊಂದಿದೆ. ಬಾಂಗ್ಲಾದಲ್ಲಿ ತಲಾವಾರು ಜಿ.ಡಿ.ಪಿ. 1,888 ಡಾಲರ್ ಇದೆ. 2020 ರಲ್ಲಿ ಭಾರತದ ತಲಾವಾರು ಜಿ.ಡಿ.ಪಿ. 1,877 ಡಾಲರ್ಗೆ ಕುಸಿದಿದೆ. 2014 ರಲ್ಲಿ ಬಾಂಗ್ಲಾದೇಶಕ್ಕಿಂತ ಸುಮಾರು 40 ಪಟ್ಟು ಮುಂದೆ ಇದ್ದ ದೇಶದ ಆರ್ಥಿಕತೆ ನರೇಂದ್ರ ಮೋದಿಯವರ ಅಪಕ್ವ, ಕಾರ್ಪೊರೇಟ್ ಪರ ಆರ್ಥಿಕ ನೀತಿಗಳಿಂದಾಗಿ ನೆಲ ಕಚ್ಚುವಂತಾಗಿದೆ ಎಂದಿದ್ದಾರೆ.
2004ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಶೇ.72 ರಷ್ಟು ಮತ್ತು ಕಾರ್ಪೊರೇಟ್ ಬಂಡವಾಳಿಗರಿಂದ ಶೇ.28 ರಷ್ಟು ತೆರಿಗೆಯನ್ನು ಸಂಗ್ರಹಿಸುತಿತ್ತು. ಆದರೆ 2010ಕ್ಕೆ ಬರುವ ವೇಳೆಗೆ ಮನಮೋಹನ್ಸಿಂಗ್ ಅವರು ಜನರಿಂದ ಸಂಗ್ರಹಿಸುವ ತೆರಿಗೆಯನ್ನು ಶೇ.58 ಕ್ಕೆ ಇಳಿಸಿದರು. ಕಾರ್ಪೊರೇಟ್ ಕಂಪನಿಗಳಿಂದ ಸಂಗ್ರಹಿಸುವ ತೆರಿಗೆಯನ್ನು ಶೇ .28 ರಿಂದ ಶೇ.40ಕ್ಕೆ ಹೆಚ್ಚಿಸಿದರು. ಅವರು ಅಧಿಕಾರದಿಂದ ಇಳಿದಾಗಲೂ ತೆರಿಗೆ ಸಂಗ್ರಹಣೆಯಲ್ಲಿ ಪರೋಕ್ಷ ತೆರಿಗೆ ಶೇ.63 ಮತ್ತು ಪ್ರತ್ಯಕ್ಷ ತೆರಿಗೆ ಶೇ.37 ರಷ್ಟು ಇತ್ತು.
ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ. ಆದರೆ ಮೋದಿಯವರ ಸರ್ಕಾರದ ನೀತಿಗಳಿಂದಾಗಿ ಜನರ ಮೇಲಿನ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ಅಂದರೆ, 15 ನೇ ಹಣಕಾಸು ಆಯೋಗವು ಅಂದಾಜು ಮಾಡಿರುವಂತೆ 2024-25 ಕ್ಕೆ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ ಕೇವಲ ಶೇ. 34.75 ರಷ್ಟು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಜನರು ಪಾವತಿಸುವ ಜಿ.ಎಸ್.ಟಿ ಯು ಶೇ.45.48 ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ವಿಧಿಸುತ್ತಿರುವ ಸುಂಕಗಳು ಶೇ. 62 ರಷ್ಟು ಹೆಚ್ಚಾಗುತ್ತವೆ. ಅಂದರೆ ಜನರು ಇನ್ನಷ್ಟು ಅನುಭವಿಸಬೇಕಾಗಿದೆ ಎಂದು ಅರ್ಥವಾಗುತ್ತದೆ ಎಂದು ವಿವರಿಸಿದ್ದಾರೆ.
ಸಾಲದ ಹೊರೆ:
ವಾಸ್ತವ ಏನೆಂದರೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014 ರ ಮಾರ್ಚ್ ವರೆಗೆ 67 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಸಾಲ 53.11 ಲಕ್ಷ ಕೋಟಿ ರೂಗಳು. ಆದರೆ 2014 ರ ಜೂನ್ ನಿಂದ 2021 ರ ವೇಳೆಗೆ 7 ವರ್ಷದಲ್ಲಿ ಮಾಡಿರುವ ಸಾಲ 82.7 ಲಕ್ಷ ಕೋಟಿ ರೂಪಾಯಿ. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ 135.87 ಲಕ್ಷ ಕೋಟಿಗಳಾಗುತ್ತವೆ. ಮತ್ತೊಂದು ಕಡೆ ಅದಾನಿ ಮುಂತಾದ ಕೆಲ ಮೋದಿ ಪರಮಾಪ್ತ ಕಾರ್ಪೊರೇಟ್ ಬಂಡವಾಳಿಗರ ಸುಮಾರು 11 ಲಕ್ಷ ಕೋಟಿಗಳಷ್ಟು ಸಾಲವನ್ನು ಎನ್ಪಿಎ (ವಸೂಲಾಗದ ಸಾಲ) ಎಂದು ಘೋಷಿಸಲಾಗಿದೆ. 2018ರಿಂದ ಈಚೆಗೆ ಕಳೆದ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ರೈಟ್ ಆಫ್ [ಮನ್ನಾ?] ಮಾಡಲಾಗಿದೆ ಎಂದು ಹೇಳಿರುವ ಸಿದ್ದರಾಮಯ್ಯ ಭಾರತ ಮತ್ತು ಇತರೆ ದೇಶಗಳ ತೆರಿಗೆ ಪದ್ಧತಿ ಕುರಿತು ಸವಿಸ್ತಾರ ವಿವರಣೆ ನೀಡಿದ್ದಾರೆ.
'ಮಾರಾಟವಾಗುತ್ತಿರುವ ಇಂಡಿಯಾ'
ದೇಶದ ದೊಡ್ಡ ಸಂಖ್ಯೆಯ ಯುವಕರು ಮೋದಿಯವರನ್ನು ನಂಬಿ ಕಣ್ಣು ಮುಚ್ಚಿಕೊಂಡು ಆಯ್ಕೆ ಮಾಡಿದರು. ಈಗ ಅವರೆಲ್ಲ ಕಣ್ ಕಣ್ ಬಿಡುತ್ತಿದ್ದಾರೆ. 2014ರಲ್ಲಿ 20 ವರ್ಷದ ಯುವಕನಿಗೆ 2024ರ ವೇಳೆಗೆ 30 ವರ್ಷ ವಯಸ್ಸಾಗುತ್ತದೆ. 30 ವರ್ಷದವರಿಗೆ 40 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ. ದೇಶವೊಂದರ ದೊಡ್ಡ ಸಂಪತ್ತುಗಳಲ್ಲಿ ಮಾನವ ಸಂಪತ್ತೂ ಕೂಡ ಒಂದು. ಯಾವ ದೇಶ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತದೋ ಅಂಥಹ ದೇಶದ ಅಭಿವೃದ್ಧಿ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಆ ದೇಶದ ಆರ್ಥಿಕತೆ ವಿನಾಶದ ಹಾದಿ ಹಿಡಿಯುತ್ತದೆ. ಇದು ಮೇಕ್ ಇನ್ ಇಂಡಿಯಾ ಅಲ್ಲ ಮಾರಾಟವಾಗುತ್ತಿರುವ ಇಂಡಿಯಾ ಎಂದು ಹೇಳಿದ್ದಾರೆ.
ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು:
ಯಾವುದೇ ದೇಶ ಸ್ವಾವಲಂಬಿಯಾಗುವುದು ಎಂದರೆ ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು. ಹಾಗಾಗಬೇಕಾದರೆ ಆಮದು ಶುಲ್ಕವನ್ನು ಅಂದರೆ ಕಸ್ಟಮ್ಸ್ ತೆರಿಗೆಗಳನ್ನು ಹೆಚ್ಚಿಸಬೇಕು. ಆದರೆ ಮೇಕ್ ಇನ್ ಇಂಡಿಯಾ ಎಂದು ಘೋಷಣೆ ಮಾಡಿದ ಭಾರತದಲ್ಲಿ ಇಂದು ಆಗುತ್ತಿರುವುದೇನು? 2013-14 ರಲ್ಲಿ ರೂ.32.20 ಲಕ್ಷ ಕೋಟಿ ಮೌಲ್ಯದಷ್ಟು ಆಮದು ಮಾಡುತ್ತಿದ್ದರೆ, 2019-20 ರಲ್ಲಿ ಅದು ಇನ್ನಷ್ಟು ಹೆಚ್ಚಾಗಿ ಹತ್ತತ್ತಿರ ರೂ.35 ಲಕ್ಷ ಕೋಟಿ ಮೌಲ್ಯದಷ್ಟು ವಸ್ತುಗಳ ಆಮದನ್ನು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಘೋಷಣೆ ನಿಜವೇ ಆಗಿದ್ದರೆ, ರಫ್ತಿನ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಬೇಕಾಗಿತ್ತು. ಆದರೆ ಇಲ್ಲಿ ಸುಮಾರು ರೂ.1.25 ಲಕ್ಷ ಕೋಟಿ ಮೌಲ್ಯದಷ್ಟು, 2013-14ಕ್ಕೆ ಹೋಲಿಸಿದರೆ ಕಡಿಮೆ ರಫ್ತು ಮಾಡುತ್ತಿದ್ದೇವೆ.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಗೊಂದಲ ವಿಚಾರ: 'ಕೈ' ನಾಯಕರಿಂದ ಮೌನವೇ ಉತ್ತರ
2015 ರಲ್ಲಿ ಮನಮೋಹನ್ ಸಿಂಗ್ ಅವರು ಅಧಿಕಾರದಿಂದ ಇಳಿದ ನಂತರದ ವರ್ಷದಲ್ಲೇ ರಫ್ತಿನ ಪ್ರಮಾಣ ರೂ. 19 ಲಕ್ಷ ಕೋಟಿಗಳಿಗೆ ಇಳಿಯಿತು. 2016 ರಲ್ಲಿ ರೂ.19 ಲಕ್ಷ ಕೋಟಿಗಳಿಗಿಂತಲೂ ಕಡಿಮೆಯಾಗುತ್ತದೆ. ಇದೇ ಅವಧಿಯಲ್ಲಿ ಕಸ್ಟಮ್ಸ್ ತೆರಿಗೆಯ ಸಂಗ್ರಹಣೆ ಕೂಡ ವೇಗವಾಗಿ ಕಡಿಮೆಯಾಯಿತು, ಈಗಲೂ ಕಡಿಮೆಯಾಗುತ್ತಿದೆ. ಅಂದರೆ ಆಮದು ವಸ್ತುಗಳ ಮೇಲೆ ಅತ್ಯಂತ ಕಡಿಮೆ ಮಟ್ಟದ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕಸ್ಟಮ್ಸ್ ತೆರಿಗೆ 1,72,085 ಕೋಟಿಗಳಿಂದ 1,09,282 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಆಮದು ಶುಲ್ಕ ಕಡಿಮೆ ಮಾಡಿದರೆ ವಿದೇಶಿ ವಸ್ತುಗಳ ಬೆಲೆ ಕಡಿಮೆಯಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ ನಿಮ್ಮ ಮೇಕ್ ಇನ್ ಇಂಡಿಯಾ ಘೋಷಣೆ ಬರೀ ಬುರ್ನಾಸು ಎನ್ನಿಸಿಕೊಳ್ಳುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
'ದೇಶವನ್ನು ಮಾರಾಟ ಮಾಡುತ್ತಿದ್ದೇನೆ ಎಂಬಂತೆ ಕೇಳಿಸುತ್ತಿದೆ'
ಯಾವಾಗ ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು 2014 ರಲ್ಲಿ ಘೋಷಣೆ ಮಾಡಿದರೋ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಬಿಟ್ಟರು. ರೇಷ್ಮೆ ಮೇಲಿನ ಆಮದು ತೆರಿಗೆ ಶೇ. 30 ರಿಂದ ಶೇ.5 ಕ್ಕೆ ಇಳಿಯಿತು. ಅನೇಕ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಯಾಯಿತು. ಒಂದು ಕೆ.ಜಿ.ಗೆ 750/-ನಂತೆ ಮಾರಾಟವಾಗುತ್ತಿದ್ದ ಮೆಣಸು ಈಗ ರೂ.250/- ಕ್ಕೆ ಇಳಿದು ಬಿಟ್ಟಿದೆ. ರೇಷ್ಮೆ ಬೆಳೆಗಾರರು ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಪ್ರಮುಖ ಕಾರಣ. ಇಂಥಹ ಹಲವಾರು ಕಾರಣಗಳಿಂದಾಗಿ, ಪ್ರಧಾನಿ ಮೋದಿಯವರು ಮಾಡಿದ ಘೋಷಣೆಗಳನ್ನು, ಮಾತುಗಳನ್ನು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅರ್ಥ ಮಾಡಿಕೊಂಡರೆ ಮಾತ್ರ ನಿಜ ಏನೆಂದು ಅರ್ಥವಾಗುತ್ತದೆ. ದೇಶವನ್ನು ಅಭಿವೃಧ್ಧಿ ಮಾಡುತ್ತಿದ್ದೇನೆ ಎಂದು ಅವರು ಘೋಷಣೆ ಕೂಗಿದರೆ ದೇಶವನ್ನು ಮಾರಾಟ ಮಾಡುತ್ತಿದ್ದೇನೆ ಎಂಬಂತೆ ಕೇಳಿಸುತ್ತದೆ ಎಂದಿದ್ದಾರೆ.