ಬೆಂಗಳೂರು: ಭಂಡತನ ಅಂದರೆ ಸಿದ್ದರಾಮಯ್ಯ, ನಿದ್ದೆತನ ಅಂದರೆ ಅಂದ್ರೆ ಸಿದ್ದರಾಮಯ್ಯ. ಅವರಿಗೆ ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ 75 ವರ್ಷ ವಯಸ್ಸಾಗಿದೆ. ನಿವೃತ್ತಿ ತೆಗೆದುಕೊಂಡು, ಬೇರೆಯವರಿಗೆ ಅವಕಾಶ ಮಾಡಿಕೊಡುವುದನ್ನು ಬಿಟ್ಟು, ನಾನೇ ಅಂತಿದ್ದಾರೆ. ಕಾಂಗ್ರೆಸ್ ಗೆ ನಾಯಕತ್ವನೇ ಇಲ್ಲ. ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೂಡ ವಯಸ್ಸಾಗಿದೆ. 75 ವರ್ಷ ಆದ ಎಲ್ಲರೂ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಒತ್ತಾಯಿಸಿದರು.
ನಾವು ಕಾನೂನಿಗೆ ಬೆಲೆ ಕೊಡುತ್ತೇವೆ : ಸೈಲೆಂಟ್ ಸುನೀಲ್ ವಿಚಾರವಾಗಿ ಮಾತನಾಡಿದ ಸಚಿವರು, ಸೈಲೆಂಟ್ ಸುನೀಲ್ ಕಾರ್ಯಕ್ರಮಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಸುನೀಲ್ ರಕ್ತದಾನ ಶಿಬಿರ ಮಾಡಿದ್ದರು. ಸಾಮಾಜಿಕ ಕಾರ್ಯಕ್ರಮ ಎಂದು ಇಬ್ಬರು ಪ್ರತಿನಿಧಿಗಳು ಹೋಗಿದ್ದರು. ನಾವು ಕಾನೂನಿಗೆ ಬೆಲೆ ಕೊಡುತ್ತೇವೆ. ಕಾನೂನು ಚೌಕಟ್ಟನ್ನು ನಾವು ಪರಿಪಾಲನೆ ಮಾಡ್ತೇವೆ. ಪಕ್ಷದ ಅಧ್ಯಕ್ಷರು ಕೂಡ ಇಂದು ಇದನ್ನೇ ಹೇಳಿದ್ದಾರೆ ಎಂದು ಸ್ಫಷ್ಟನೆ ನೀಡಿದರು.
ಮಂಡ್ಯದಲ್ಲಿ ರಕ್ತ ಹೀರುವ ನಾಯಕ ಯಾರು ಎಂಬ ವಿಚಾರಕ್ಕೆ ಮಾತನಾಡಿದ ಸಚಿವರು, ಈಗಾಗಲೇ ಆ ಬಗ್ಗೆ ಹೇಳಿದ್ದೇನೆ, ಅರ್ಥ ಆಗಿರುವವರಿಗೆ ಅರ್ಥ ಆಗಿದೆ ಬಿಡಿ ಎಂದರು.
ಇದನ್ನೂ ಓದಿ : ಪಕ್ಷಾಂತರ ಪರ್ವ.. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಎಚ್ ನಿಂಗಪ್ಪ