ಬೆಂಗಳೂರು: ಯಾರು ಯಾವ ದೇವಸ್ಥಾನದಲ್ಲಿ ಬೇಕಾದ್ರು ಹೋಗಿ ಗಂಟೆ ಹೊಡೆದು ಹೇಳಬಹುದು. ಕುಮಾರಸ್ವಾಮಿ 14 ತಿಂಗಳು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಕ್ಕೆ ಸಿದ್ದರಾಮಯ್ಯ ಕಾರಣವೆಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಬೇಡ. ಅವರು ಬಹಳ ಮುಂದೆ ಹೋಗಿದ್ದಾರೆ, ಬಿಟ್ಟುಬಿಡಿ ಎಂದು ಸಿದ್ದರಾಮಯ್ಯಗೆ ಕುಮಾರಸ್ವಾಮಿ ಹೇಳಿರಲಿಲ್ವ. ನಮ್ಮ ಬೆಂಬಲವಿಲ್ಲದೇ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ತೇವೆ ಎಂದವರು ಕುಮಾರಸ್ವಾಮಿ. ಈಗೇಕೆ ಸೋಲಿಗೆ ಸಿದ್ದರಾಮಯ್ಯ ಕಾರಣವೆಂದು ಆರೋಪ ಮಾಡ್ತಾರೆ. ಮೈತ್ರಿ ಸರ್ಕಾರ ಬೀಳೋಕೆ ಕುಮಾರಸ್ವಾಮಿ ಕಾರಣ, ಮೈತ್ರಿ ಆಗದಿದ್ದರೇ ಕಾಂಗ್ರೆಸ್ ಪಕ್ಷಕ್ಕೆ ಒಂದು ಒಳ್ಳೆ ಭವಿಷ್ಯ ಇತ್ತು. ಕಾಂಗ್ರೆಸ್ ಹೈಕಮಾಂಡ್ನವರು ಶಾಸಕರು, ರಾಜ್ಯ ನಾಯಕರ ಅಭಿಪ್ರಾಯ ಕೇಳದೆ ಕುಮಾರಸ್ವಾಮಿಗೆ ಸಿಎಂ ಸ್ಥಾನ ಕೊಟ್ಟಿದ್ದರು. ಈ ಬಗ್ಗೆ ಕಾಂಗ್ರೆಸ್ ನಲ್ಲಿ ಅಸಮಾಧಾನವಿತ್ತು. ಆದ್ರೆ 37 ಶಾಸಕರ ಜೆಡಿಎಎಸ್ನಲ್ಲಿ ಅಸಮಾಧಾನ ಏಕಿತ್ತು ಎಂದು ಪ್ರಶ್ನಿಸಿದ್ದಾರೆ.
ಈಗ ಉಪ ಚುನಾವಣೆಗೋಸ್ಕರ ದೇವೇಗೌಡರು ಸಿದ್ದರಾಮಯ್ಯ ಮೇಲೆ ಆರೋಪ ಮಾಡ್ತಿದ್ದಾರೆ. ಉಪಚುನಾವಣೆಯನ್ನು ನೇರವಾಗಿ ಎದುರಿಸಲು ಜೆಡಿಎಸ್ ಸಿದ್ಧವಾಗಿಲ್ಲ. ಹೀಗಾಗಿ ಒಕ್ಕಲಿಗ ಸಮಾಜ ಒಂದುಗೂಡಿಸಿ, ಗೆಲ್ಲಲು ದೇವೇಗೌಡರು ಈ ತಂತ್ರ ಹೆಣೆದಿದ್ದಾರೆ. ಇಲ್ಲಿ ಜಾತಿ ತರೋದು ಸರಿಯಲ್ಲ. ನಾನು ರೇವಣ್ಣ ಅವರ ಹೆಸರನ್ನು ಹೇಳಲ್ಲ. ಹೆಚ್.ಡಿ ರೇವಣ್ಣನ ಮೇಲೆ ಸುಮ್ನೆ ಏಕೆ ಆರೋಪ ಮಾಡಬೇಕು. ಅಂತಿಮವಾಗಿ ಸಹಿ ಹಾಕುವವರು ಕುಮಾರಸ್ವಾಮಿ ಅಲ್ಲವಾ? ಕುಮಾರಸ್ವಾಮಿ ಸಹಿ ಹಾಕದಿದ್ದರೆ ಎಂಟಿಬಿ ನಾಗರಾಜ್ ಖಾತೆಯಲ್ಲಿ ಹೇಗೆ ವರ್ಗಾವಣೆಗಳು ಆಗುತ್ತವೆ ಎಂದು ಚಲುವರಾಯಸ್ವಾಮಿ ಕೇಳಿದ್ದಾರೆ.