ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕಿತ್ತಾಟ ಬಗೆಹರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ಗೆ ಸೂಚಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಭೇಟಿಯಾದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಉಸ್ತುವಾರಿ ಕೃಷ್ಣ ಅಲ್ಲ ಅವರು ಅವರಿಗೆ ಇಂದು ಸಿದ್ದರಾಮಯ್ಯ ಈ ಸೂಚನೆ ನೀಡಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅತಿ ಹೆಚ್ಚು ಮತಗಳಿಸಿ ಆಯ್ಕೆಯಾಗಿದ್ದ ಮಹಮ್ಮದ್ ನಲಪಾಡ್ರ ಗೆಲುವನ್ನ ಅನರ್ಹಗೊಳಿಸಿದ ಕಾಂಗ್ರೆಸ್, ಎರಡನೇ ಅತಿ ಹೆಚ್ಚು ಮತ ಗಳಿಸಿದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರು ಎಂದು ಅಧಿಕೃತವಾಗಿ ಘೋಷಿಸಿತ್ತು. ಆದರೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿ ಯುವ ಕಾಂಗ್ರೆಸ್ ಅಧ್ಯಕ್ಷರ ಚಟುವಟಿಕೆಯಲ್ಲಿ ರಕ್ಷಾ ರಾಮಯ್ಯ ಭಾಗಿಯಾಗಿಲ್ಲ. ಆಯ್ಕೆಯ ವಿಚಾರದಲ್ಲಿ ಎದುರಾದ ಗೊಂದಲ ನಿವಾರಣೆಗೆ 3 ಆಯ್ಕೆಗೆ ಮನವಿ ಮಾಡಲಾಗಿತ್ತು. ಈ ಪ್ರಕ್ರಿಯೆ ಮುಗಿದರೂ ಇದುವರೆಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಯಾರು ಅಧಿಕೃತವಾಗಿ ಗೆದ್ದಿದ್ದಾರೆ ಎಂಬ ಮಾಹಿತಿ ಒದಗಿಸಿಲ್ಲ.
ಈ ಕಾರಣದಿಂದ ನಲಪಾಡ್ ಆದಷ್ಟು ಬೇಗ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಹಾಲಿ ಅಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ನಲಪಾಡ್ ಇಂತಹ ಬೆಳವಣಿಗೆಗಳು ನಡೆಯುವುದಿಲ್ಲ ಎನ್ನುತ್ತಿದ್ದಾರೆ.
ಆದರೆ, ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಈ ಇಬ್ಬರೂ ನಾಯಕರು ಒಟ್ಟಾಗಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಕೋವಿಡ್ ಆತಂಕದ ಸಂದರ್ಭದಲ್ಲಿಯೂ ಇಬ್ಬರು ನಾಯಕರು ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಮಂಜುನಾಥ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರೂ ನಾಯಕರನ್ನು ಪ್ರತ್ಯೇಕವಾಗಿಯೇ ಭೇಟಿಯಾಗಿ ತೆರಳುತ್ತಿದ್ದಾರೆ.
ಇದನ್ನೂ ಓದಿ:SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲೇಬೇಕೆಂಬ ಹಠವೇಕೆ?- ಶಿಕ್ಷಣ ಸಚಿವ ವಿರುದ್ಧ ವಾಟಾಳ್ ಕಿಡಿ
ಇದೀಗ ರಕ್ಷಾ ರಾಮಯ್ಯಗೆ ಬೆಂಬಲವಾಗಿ ನಿಂತಿದ್ದ ಸಿದ್ದರಾಮಯ್ಯ ಹಾಗೂ ಮಹಮ್ಮದ್ ನಲಪಾಡ್ಗೆ ಬೆಂಬಲವಾಗಿ ನಿಂತಿದ್ದ ಡಿ.ಕೆ. ಶಿವಕುಮಾರ್ ತಟಸ್ಥರಾಗುವ ತೀರ್ಮಾನ ಕೈಗೊಂಡಿದ್ದಾರೆ ಎಂಬ ಮಾಹಿತಿಯಿದೆ. ರಾಜ್ಯ ನಾಯಕರ ಸೂಚನೆ ಮೇರೆಗೆ ಶ್ರೀನಿವಾಸ್ ನಾಯಕರನ್ನು ಭೇಟಿಯಾಗಿ ಮಾತನಾಡಿ, ಸಮಸ್ಯೆ ಪರಿಹರಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಂಜುನಾಥ್ ಚರ್ಚಿಸಿದ್ದಾರೆ.