ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟರ್ ಮೂಲಕ ಬಿಜೆಪಿ ಸರ್ಕಾರ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರೇ ನೀವು ಅನುಭವಿಸುತ್ತಿರುವ ಅವಮಾನ, ಅನ್ಯಾಯ ನೋಡುತ್ತಿದ್ದರೆ ರಾಜಕೀಯ ಎದುರಾಳಿಯಾದ ನನ್ನಂತವನಲ್ಲಿಯೂ ಅನುಕಂಪ ಮೂಡುವಂತಾಗಿದೆ ಎಂದಿದ್ದಾರೆ.
ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತುಗಳನ್ನು ಗಮನಿಸಿದರೆ ಜನಪ್ರತಿನಿಧಿಗಳ ದನಿ ಉಡುಗಿಹೋಗಿ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸಿರುತ್ತಿರುವ ಹಾಗೆ ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳಾದ ಬಿಎಸ್ವೈ ಅವರೇ, ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 3 ದಿನ, ಸಂಪುಟ ರಚನೆಗೆ 26 ದಿನ, ಮತ್ತು ಖಾತೆ ಹಂಚಿಕೆಗೆ 6 ದಿನ ತೆಗೆದುಕೊಂಡಿದ್ದೀರಿ. ಈಗ ಭಿನ್ನಮತ ಶಮನಕ್ಕೆ ಇನ್ನೆಷ್ಟು ದಿನ ಬೇಕು? ಈ ಎಲ್ಲದರ ನಡುವೆ ನಿಮ್ಮ ಸರ್ಕಾರ ಟೇಕ್ ಆಫ್ ಆಗುವುದು ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ.