ಬೆಂಗಳೂರು: ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಡೆಯ ಕ್ಷಣದವರೆಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮವರ ಆಯ್ಕೆಗಾಗಿ ಕಸರತ್ತು ನಡೆಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಈ ಸಂದರ್ಭ ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲು ಕೊನೆ ಕ್ಷಣದ ಕಸರತ್ತು ನಡೆಸಿದರು.
ಕಾರ್ಯಕ್ರಮದಿಂದ ಎದ್ದು ಹೊರ ಬಂದು ಧೃವನಾರಾಯಣ್ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಚುನಾವಣಾ ವೀಕ್ಷಕರಾಗಿರುವ ದೃವನಾರಾಯಣ್ ಜೊತೆ 10 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.
ಕಾಂಗ್ರೆಸ್ ಪರ ಒಲವಿರುವ ಜೆಡಿಎಸ್ ಕಾರ್ಪೋರೇಟರ್ಸ್ ಜೊತೆ ಮಾತನಾಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರಾದರೂ ಕಡೆಯವರೆಗೂ ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ. ತಟಸ್ಥ ನಿಲುವು ತೋರಿರುವ ಕಾರ್ಪೋರೇಟರ್ಸ್ ಜೊತೆ ಚರ್ಚೆ ಮಾಡಿ ಮನವೊಲಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು. ಕೊನೆ ಕ್ಷಣದಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಸಿದ್ದರಾಮಯ್ಯ ಪ್ಲಾನ್ ಮಾಡಿದರೂ ಅಂತಿಮವಾಗಿ ಅದು ಫಲ ಕೊಡಲೇ ಇಲ್ಲ.
ಕಾರ್ಯಕ್ರಮ ಮಧ್ಯೆ ಎರಡು ಬಾರಿ ವೇದಿಕೆಯಿಂದಿಳಿದು ಫೋನ್ ಮಾಡಲು ಹೊರಗೆ ಎದ್ದು ಹೋದ ಸಿದ್ದರಾಮಯ್ಯ, ಮೈಸೂರು ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಬಗೆಗಿನ ಅಪ್ಡೇಟ್ ಪಡೆಯಲು ಹೊರಗೆ ಹೋಗಿ ಬಂದು ಮಾಡಿದರು. ಫೋನ್ ಮೂಲಕ ಮೈಸೂರು ಕಾಂಗ್ರೆಸ್ ನಾಯಕರಿಗೆ ಕರೆ ಮಾಡಿ ಮಾಹಿತಿ ಪಡೆದರು. ತನ್ವೀರ್ ಸೇಠ್ಗೆ ಸಿದ್ದರಾಮಯ್ಯ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಧೃವನಾರಾಯಣ ಸೇರಿ ಒಂದಿಬ್ಬರು ನಾಯಕರ ಜತೆ ಮಾತಾಡಿದ ಸಿದ್ದರಾಮಯ್ಯಗೆ ನೆಟ್ವರ್ಕ್ ಸಮಸ್ಯೆ, ಮತ್ತೆ ಮತ್ತೆ ಕಾಲ್ ಕಡಿತ ಆಯ್ತು. ಆದ್ರೂ ಮತ್ತೆ ಮತ್ತೆ ಕಾಲ್ ಮಾಡಿ ಮಾತಾಡಲು ಪ್ರಯತ್ನಿಸಿದ ಸಿದ್ದರಾಮಯ್ಯ ಕೊನೆಗೂ ಅವಕಾಶ ಸಿಗದಿದ್ದಾಗ ತೀವ್ರ ನಿರಾಸೆಗೊಂಡರು.
ಕೊನೆಗೂ ಪ್ರಯತ್ನ ಫಲ ಕೊಡದೇ ಜೆಡಿಎಸ್ಗೆ ಮೇಯರ್ ಸ್ಥಾನ ಸಿಕ್ಕಿದ ಹಿನ್ನೆಲೆ ಬೇಸರದಿಂದ ಮತ್ತೆ ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮಕ್ಕೆ ವಾಪಸ್ ಹೋದರು. ನಂತರ ಮಾಧ್ಯಮದವರು ಪ್ರತಿಕ್ರಿಯೆಗೆ ಪ್ರಯತ್ನಿಸಿದರಾದರೂ ಕಾರ್ಯಕ್ರಮ ನಂತರ ಮಾತನಾಡುತ್ತೇನೆ ಎಂದರು.
ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರವಾಗಿ ಚುಟುಕಾಗಿ ಉತ್ತರ ನೀಡಿ, ನಮ್ಮದೇನಿಲ್ಲ, ಎಲ್ಲಾ ನಿರ್ಧಾರಗಳನ್ನೂ ಸ್ಥಳೀಯ ನಾಯಕರಿಗೆ ಬಿಟ್ಟಿದ್ವಿ. ಚುನಾವಣೆ ಬಗ್ಗೆ ಎಲ್ಲಾ ನಿರ್ಧಾರಗಳನ್ನು ಮಾಡಿದ್ದು ಸ್ಥಳೀಯ ನಾಯಕರೇ. ಮೇಯರ್ ಚುನಾವಣೆ ಬಗ್ಗೆ ರಾಜ್ಯ ನಾಯಕರ ನಿರ್ಧಾರ ಇಲ್ಲ ಎಂದರು.