ಬೆಂಗಳೂರು : ಕಣ್ಣಿಗೆ ಸೋಂಕು ಉಂಟಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ. ಬೆಳಗ್ಗೆ ಕಣ್ಣಿನ ತಪಾಸಣೆ ನಡೆಸಿ, ವೈದ್ಯರು ನೀಡಿದ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆ.19ರಿಂದ 21ರವರೆಗೆ ತಮ್ಮ ಬಾದಾಮಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿಕೊಟ್ಟು ಅಲ್ಲಿನ ಜನರ ಸಮಸ್ಯೆ ಆಲಿಸಿದ್ದ ಸಿದ್ದರಾಮಯ್ಯ, ನಿರಂತರ ಓಡಾಟದಿಂದ ದಣಿದಿದ್ದರು. ಅಲ್ಲದೇ, ಇತ್ತೀಚೆಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಈ ಓಡಾಟದ ಸಂದರ್ಭ ಅವರಿಗೆ ಇನ್ನಷ್ಟು ಸಮಸ್ಯೆ ಎದುರಾಗಿದೆ. ಈ ಕಾರಣದಿಂದ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಗೆ ತೆರಳಿ, ಅಲ್ಲಿ ಸಂಜೆ 4 ಗಂಟೆಗೆ ನಡೆಯುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿತ್ತು. ಅಲ್ಲದೇ, ರಾತ್ರಿ ಕರ್ನಾಟಕ ಭವನದಲ್ಲಿ ತಂಗಿ ಶುಕ್ರವಾರ ಬೆಳಗ್ಗೆ 11.50ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ಕಣ್ಣಿನ ಸೋಂಕಿನಿಂದಾಗಿ ಎರಡು ದಿನದ ಸಿದ್ದರಾಮಯ್ಯ ದಿಲ್ಲಿ ಪ್ರವಾಸ ರದ್ದಾಗಿದೆ.