ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಹೇರಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳಾಗುತ್ತಿದ್ದು, ನಿತ್ಯದ ದುಡಿಮೆ ನಂಬಿ ಬದುಕುತ್ತಿದ್ದವರ ಜೀವನ ದುಸ್ತರವಾಗಿದೆ. ಈ ಹಿನ್ನೆಲೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ವಿವಿಧ ಸಮುದಾಯಗಳು ಹಾಗೂ ಸಂಘಟನೆಗಳ ಮುಖಂಡರ ಸಭೆ ನಡೆಸಿ ಲಾಕ್ಡೌನ್ ವೇಳೆ ಉಂಟಾಗಿರುವ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸಿದರು.
ಸವಿತಾ ಸಮಾಜದವರು, ಮಡಿವಾಳರು, ನೇಕಾರರು, ಕುಂಬಾರರು, ಕಮ್ಮಾರರು, ಚಮ್ಮಾರರು ಹಾಗೂ ಅಟೋ, ಟ್ಯಾಕ್ಸಿ ಚಾಲಕರು ಮತ್ತು ಬೀದಿಬದಿಯ ವ್ಯಾಪಾರಿಗಳ ಸಂಘಟನೆಯ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು. ಬಡವರು ಹಾಗೂ ಮಧ್ಯಮ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಅವರಿಗೆ ನೆರವು ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹೆಚ್.ಎಂ.ರೇವಣ್ಣ, ಎಂ.ಸಿ.ವೇಣುಗೋಪಾಲ್, ಎಂ.ಡಿ.ಲಕ್ಷ್ಮಿನಾರಾಯಣ ಮತ್ತಿತರರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.